ನಾಯಿಗಳ ದಾಳಿಗೆ ಬಾಲಕಿ ಬಲಿ

ಕುಣಿಗಲ್, ಸೆ. ೧೦- ಬಾಲಕಿಯ ಮೇಲೆ ಐದಾರು ನಾಯಿಗಳ ಗುಂಪೊಂದು ದಾಳಿ ಮಾಡಿದ್ದರ ಪರಿಣಾಮ ಬಾಲಕಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ನಿಂಗಯ್ಯನಪಾಳ್ಯ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ನಿಂಗಯ್ಯನಪಾಳ್ಯದ ಗಂಗಾಧರಯ್ಯ ಮತ್ತು ಗಂಗಮ್ಮ ಎಂಬುವರ ಪುತ್ರಿ ತೇಜಸ್ವಿನಿ (10) ನಾಯಿ ದಾಳಿಯಿಂದ ಸಾವನ್ನಪ್ಪಿರುವ ದುರ್ವೈವಿ ಬಾಲಕಿ. ಈಕೆ ತನ್ನ ತಾಯಿ ಜತೆ ಬಟ್ಟೆ ತೊಳೆಯಲು ಕೆರೆಗೆ ಹೋಗಿದ್ದಳು. ತಾಯಿ ಬಟ್ಟೆ ತೊಳೆದು ಮನೆಗೆ ಹೊರಟಾಗ ತೇಜಸ್ವಿನಿ ಅಣಬೆ ಕಿತ್ತುಕೊಂಡು ಬರುತ್ತೇನೆಂದು ಕೆರೆ ಬಳಿಯೇ ಉಳಿದಿದ್ದಳು. ಒಂದು ಗಂಟೆಯಾದರೂ ಮಗಳು ಮನೆಗೆ ಬಾರಿದಿದ್ದಕ್ಕೆ ಗಾಬರಿಗೊಂಡ ತಾಯಿ ಗಂಗಮ್ಮ ತನ್ನ ಪತಿಗೆ ಮಗಳನ್ನು ಕರೆದುಕೊಂಡು ಬರಲು ತಿಳಿಸಿದ್ದಾಳೆ. ಆದರೆ ಆತ ಕೆರೆ ಬಳಿ ಬಂದಾಗ ಐದಾರು ನಾಯಿಗಳ ಗುಂಪು ತೇಜಸ್ವಿನಿಯನ್ನು ಕಚ್ಚಿ ಎಳೆದಾಡುತ್ತಿದ್ದವು. ಕೂಡಲೇ ನಾಯಿಯನ್ನು ಓಡಿಸಿ ಮಗಳನ್ನು ಎತ್ತಿಕೊಂಡು ಆಸ್ಪತ್ರೆಗೆ ತರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು. ಆಕೆಯ ಕೈ, ಮುಖವನ್ನೆಲ್ಲಾ ನಾಯಿಗಳು ತಿಂದು ಹಾಕಿದ್ದವು.

ಕೆರೆಯ ಹಿಂಭಾಗದಲ್ಲಿ ಕೋಳಿ ಮಾಂಸ ಸೇರಿದಂತೆ ಇತರೆ ತ್ಯಾಜ್ಯವನ್ನು ಹಾಕಲಾಗುತ್ತಿದ್ದು, ನಿತ್ಯ ಮಾಂಸ ಮೂಳೆಯನ್ನು ತಿನ್ನುವುದು ಅಲ್ಲದೆ ಜೀವಂತ ಕುರಿ, ಮೇಕೆ ಹಾಗೂ ಸಣ್ಣ ಕರುಗಳನ್ನು ಹಿಡಿದು ತಿಂದಿವೆ ಎಂದು ದೂರಿರುವ ಗ್ರಾಮಸ್ಥರು, ನಾಯಿಗಳು ರಕ್ತದ ರುಚಿಯಿಂದ ಇಂತಹ ಅಮಾಯಕ ಹೆಣ್ಣು ಮಗಳನ್ನು ಬಲಿ ತೆಗೆದುಕೊಂಡಿವೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷವೇ ಕಾರಣ ಎಂದು ಗ್ರಾಮಸ್ಥರು ಹಾಗೂ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Comment