ನಾಯಕತ್ವಕ್ಕೆ ಧೋನಿ ಗುಡ್ ಬೈ


ಮುಂಬೈ: ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ಸ್ಥಾನ ತೊರೆದಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ನಾಯಕತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ನಾಯಕತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರೂ ಧೋನಿ ತಂಡದಲ್ಲಿ ಆಟಗಾರರಾಗಿ ಮುಂದುವರೆಯುವುದಾಗಿ ಹೇಳಿಕೊಂಡಿದ್ದಾರೆ. ಏಕದಿನ ಹಾಗೂ ಟಿ20 ಮಾದರಿಯಲ್ಲಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಭಾರತದ ಮೊದಲ  ನಾಯಕ ಎಂಬ ಖ್ಯಾತಿಗೆ ಕಾರಣರಾಗಿದ್ದ ಮಹೇಂದ್ರ ಸಿಂಗ್ ಧೋನಿ ಇದೀಗ ನಾಯಕತ್ವವನ್ನು ತ್ಯಜಿಸುವ ಮೂಲಕ ಭಾವಿ ನಾಯಕ ಎಂದೇ ಬಿಂಬಿತರಾಗಿದ್ದ ವಿರಾಟ್ ಕೊಹ್ಲಿಗೆ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ.
ನಾಯಕತ್ವದಿಂದ  ಕೆಳಗಿಳಿದ ನಿರ್ಧಾರವನ್ನು ಧೋನಿ, ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಹಾಗೂ ಬಿಸಿಸಿಐಗೆ ತಿಳಿಸಿದ್ದಾರೆ.ಇನ್ನು ಧೋನಿ ನಿರ್ಧಾರವನ್ನು ಬಿಸಿಸಿಐ ಸ್ವಾಗತಿಸಿದ್ದು, “ಭಾರತೀಯ ಕ್ರಿಕೆಟ್ನ ಎಲ್ಲ ಅಭಿಮಾನಿಗಳು ಹಾಗೂ ಬಿಸಿಸಿಐ ಪರವಾಗಿ ಎಂಎಸ್ ಧೋನಿಗೆ ಧನ್ಯವಾದ ಹೇಳುತ್ತಿದ್ದೇವೆ. ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಭಾರತ ತಂಡದ  ನಾಯಕನಾಗಿ ತಂಡಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ತಂಡ ತನ್ನ ಸಾಧನೆಯ ಮೂಲಕ ಇನ್ನಷ್ಟು ಉನ್ನತ ಹಂತಕ್ಕೇರಿತ್ತು.
ಧೋನಿಯ ಸಾಧನೆಗಳು ಭಾರತೀಯ ಕ್ರಿಕೆಟ್’ನ ಇತಿಹಾಸವಾಗಿ  ಉಳಿದುಕೊಳ್ಳಲಿವೆ’ ಎಂದು ಬಿಸಿಸಿಐನ ಮುಖ್ಯ ವ್ಯವಸ್ಥಾಪಕ ಅಧಿಕಾರಿ ರಾಹುಲ್ ಜೋಹ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಧೋನಿ ನಾಯಕತ್ವಕ್ಕೆ ರಾಜಿನಾಮೆ ನೀಡಿದ್ದರಿಂದ ಈಗಾಗಲೇ ಟೆಸ್ಟ್ ತಂಡಕ್ಕೆ ನಾಯಕರಾಗಿರುವ ಕೊಹ್ಲಿ ಇನ್ನು ಸೀಮಿತ ಓವರ್ ಗಳ ತಂಡಕ್ಕೂ ನಾಯಕರಾಗಿ ಮುಂದುವರೆಯಲಿದ್ದಾರೆ. 2015ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿಡ್ನಿ ಟೆಸ್ಟ್ನ ಮೂಲಕ ಭಾರತ ತಂಡವನ್ನು ಟೆಸ್ಟ್ ಮಾದರಿಯಲ್ಲಿ ಮುನ್ನಡೆಸಲು ಆರಂಭಿಸಿದ್ದ ವಿರಾಟ್ ಕೊಹ್ಲಿ ಈಗ ಏಕದಿನ ಹಾಗೂ ಟಿ20 ತಂಡಕ್ಕೂ ನಾಯಕರಾಗಲಿದ್ದಾರೆ.

Leave a Comment