ನಾಮಕರಣ : ಶಾಸಕರು, ಮಾಜಿ ಶಾಸಕರ ಶಿಫಾರಸ್ಸು ಪರಿಗಣಿಸಲು ಮನವಿ

* 24×7 ಕುಡಿವ ನೀರು, ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿ – ತನಿಖೆ
ರಾಯಚೂರು.ಜೂ.20- ವಿವಿಧ ಸರ್ಕಾರಿ ಸಂಸ್ಥೆಗಳ ನಾಮಕರಣ ವಿಷಯಕ್ಕೆ ಸಂಬಂಧಿಸಿ, ಆಯಾ ಕ್ಷೇತ್ರಗಳ ಕಾಂಗ್ರೆಸ್ ಅಥವಾ ಜಾದಳ ಶಾಸಕರ ಶಿಫಾರಸ್ಸು ಪರಿಗಣಿಸಬೇಕೇ ವಿನಃ ಕ್ಷೇತ್ರಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳ ಶಿಫಾರಸ್ಸು ಮಾನ್ಯ ಮಾಡದಿರುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮಾಜಿ ಶಾಸಕ ಸೈಯದ್ ಯಾಸೀನ್ ಅವರು ಮನವಿ ಮಾಡಿದ್ದಾರೆ.
ಅವರು ನಿನ್ನೆ ಮುಖ್ಯಮಂತ್ರಿಗಳನ್ನು ಖುದ್ಧಾಗಿ ಭೇಟಿ ಮಾಡಿ, ನಾಮಕರಣ ಪ್ರಕ್ರಿಯೆಗೆ ಸಂಬಂಧಿಸಿ, ಸ್ಥಳೀಯ ಕಾಂಗ್ರೆಸ್, ಜಾದಳ ಶಾಸಕರು ಅಥವಾ ಮಾಜಿ ಶಾಸಕರಿಗೆ ಮಾನ್ಯತೆ ನೀಡುವಂತೆ ಕೋರಿದರು. ನಗರ ವಿಧಾನಸಭಾ ಕ್ಷೇತ್ರದಲ್ಲಿ ಜಾದಳ ಶಾಸಕರು, ಮಾಜಿ ಶಾಸಕರಿಲ್ಲ. ಈ ಹಿನ್ನೆಲೆ, ಸಮ್ಮಿಶ್ರ ಸರ್ಕಾರದ ಪಾಲುದಾರಿ ಪಕ್ಷವಾದ ಕಾಂಗ್ರೆಸ್ಸಿನ ಮಾಜಿ ಶಾಸಕನಾಗಿ ನಾನಿದ್ದೇನೆ.
ಎಪಿಎಂಸಿ, ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಯಾವುದೇ ನಾಮಕರಣಕ್ಕೆ ಸಂಬಂಧಿಸಿ, ಪ್ರಕ್ರಿಯೆ ನಡೆದಲ್ಲಿ, ನನ್ನ ಶಿಫಾರಸ್ಸು ಪರಿಗಣಿಸುವಂತೆ ಕೋರಿದರು. ಇದರಿಂದ ಸ್ಥಳೀಯವಾಗಿ ಸಮ್ಮಿಶ್ರ ಸರ್ಕಾರ ಪ್ರಬಲವಾಗಲು ಸಾಧ್ಯವೆಂದು ಚರ್ಚೆಯಲ್ಲಿ ಹೇಳಿದರು. ಅಲ್ಲದೇ, ಈ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಬಗ್ಗೆಯೂ ಚರ್ಚೆ ನಡೆಯಿತು.
ನಗರದಲ್ಲಿ 24×7 ಕುಡಿವ ನೀರಿನ ಯೋಜನೆ, ಒಳ ಚರಂಡಿ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳಪೆ ಗುಣಮಟ್ಟದಿಂದ ನಡೆಯುತ್ತಿದ್ದು, ಸಂಬಂಧಿಸಿದ ಗುತ್ತೇದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದರು.
ಎಸ್‌ಪಿಎಂಎಲ್ ಕಂಪನಿ ಕೈಗೊಂಡ ಯೋಜನೆ ನಿಗದಿ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ. ಈ ಹಿನ್ನೆಲೆ, ಈ ಕಂಪನಿ ಕಪ್ಪು ಪಟ್ಟಿಗೆ ಸೇರಿಸಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಒಳ ಚರಂಡಿ ಕಾಮಗಾರಿಯೂ ಸಮರ್ಪಕ ನಡೆಯುತ್ತಿಲ್ಲ. ಈಗಾಗಲೇ ಸಾರ್ವಜನಿಕರಿದ ದೂರು ಕೇಳಿ ಬರುತ್ತಿವೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಅನೇಕ ಕಡೆ ಅತ್ಯಂತ ಕಳಪೆ ಮಟ್ಟದಿಂದ ನಡೆದಿದೆ. ಮುಖ್ಯ ಅಭಿಯಂತರರಿಗೆ ಈ ಬಗ್ಗೆ ಸೂಚನೆ ಜಾರಿಗೊಳಿಸಿ, ಕಳಪೆ ಗುಣಮಟ್ಟದ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಲು ಕೋರಿದರು.

Leave a Comment