ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿ ಪಂಜರ ಪತ್ತೆ

ಸಿರಾ, ಜೂ. ೧೨- ಕಳೆದ 2 ವರ್ಷದ ಹಿಂದೆ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ನೆರೆಯ ಆಂಧ್ರಪ್ರದೇಶದಲ್ಲಿ ಕೊಲೆಯಾಗಿದ್ದ ಮಹಿಳೆಯ ಅಸ್ಥಿ ಪಂಜರವನ್ನು ಹೊರ ತೆಗೆದಿದ್ದಾರೆ.

ತಾಲ್ಲೂಕಿನ ಬೆಜ್ಜಿಹಳ್ಳಿ ಗ್ರಾಮದ ಮಹಿಳೆ ಲಕ್ಷ್ಮೀದೇವಿ (45) ಎಂಬಾಕೆ 2017ರಲ್ಲಿ ಕಾಣೆಯಾಗಿದ್ದರು. ಈ ಬಗ್ಗೆ ಲಕ್ಷ್ಮೀದೇವಿ ಪುತ್ರ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ 2017ರ ಸೆ. 29 ರಂದು ದೂರು ದಾಖಲಿಸಿದ್ದರು. ಪಕ್ಕದ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ಗುಡಿಬಂಡೆ ಮಂಡಲ್ ವ್ಯಾಪ್ತಿಯ ಚಿಕ್ಕತಿರ್ಪಿ ಗ್ರಾಮದಲ್ಲಿ ಸಂಬಂಧಿಕರು ಹಣ ಕೊಡಬೇಕು, ಪಡೆದು ಬರುತ್ತೇನೆ ಎಂದು ಹೋದ ತಾಯಿ ಮನೆಗೆ ಹಿಂದಿರುಗಿಲ್ಲ ಎಂದು ದೂರಿನಲ್ಲಿ ದಾಖಲಿಸಲಾಗಿತ್ತು.

2 ವರ್ಷವಾದರೂ ಕಾಣೆಯಾಗದ ಲಕ್ಷ್ಮಿದೇವಿ ಬಗ್ಗೆ ಮಗ ರವಿ ಚಿಕ್ಕತಿರ್ಪಿ ಗ್ರಾಮದಲ್ಲಿ ಹೋಗಿ ವಿಚಾರಣೆ ಮಾಡಿದಾಗ ತನ್ನ ತಾಯಿ ಈರಣ್ಣ ಎಂಬುವರ ಜತೆ ಇದ್ದುದ್ದರ ಬಗ್ಗೆ ಮಾಹಿತಿ ಸಿಕ್ಕಿದೆ.

ಮತ್ತೆ ಪೊಲೀಸರಿಗೆ ಮರು ದೂರು ನೀಡಿದ ರವಿ ನನ್ನ ತಾಯಿಯನ್ನು ಈರಣ್ಣ ಕೊಲೆ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನ ವಂಶಿಕೃಷ್ಣ, ಡಿವೈಎಸ್‍ಪಿ ವೆಂಕಟಸ್ವಾಮಿ, ಸಿರಾ ಗ್ರಾಮಾಂತರ ಸಿಪಿಐ ಶಿವಕುಮಾರ್ ಮಾರ್ಗದರ್ಶನದಲ್ಲಿ ತೀವ್ರ ತನಿಖೆ ಮುಂದಾದ ಪಿಎಸ್‍ಐ ವಿ. ನಿರ್ಮಲ, ಈರಣ್ಣನ ಇಬ್ಬರು ಸ್ನೇಹಿತರಿಗೆ ತನಿಖೆಗೆ ಕರೆ ತಂದು ಪ್ರಕರಣ ಭೇಧಿಸುವಲ್ಲಿ ಸಫಲರಾಗಿದ್ದಾರೆ.

ಲಕ್ಷ್ಮೀದೇವಮ್ಮ ಈರಣ್ಣ ಹತ್ತಿರ ಇದ್ದದ್ದು ನಿಜ, ಒಂದು ದಿನ ಗಲಾಟೆಯಾಗಿ ಲಕ್ಷ್ಮೀದೇವಿಯನ್ನು ಕೊಲೆ ಮಾಡಿ ಇಂತಹ ಜಾಗದಲ್ಲಿ ಹೂತಾಕಿರುವುದಾಗಿ ಹೇಳಿದ ಹೇಳಿಕೆ ಆಧಾರದ ಮೇಲೆ ಆಂಧ್ರ ಪೊಲೀಸರ ಅನುಮತಿ ಪಡೆದು ಅನುಮಾನಾಸ್ಪದ ಜಾಗದಲ್ಲಿ ಅಗೆದಾಗ ಲಕ್ಷ್ಮೀದೇವಿ ಶವ ಪತ್ತೆಯಾಗಿದೆ.

ಅಸ್ಥಿಪಂಜರ ರೂಪದಲ್ಲಿದ್ದ ಶವದ ಮೇಲಿನ ಬಟ್ಟೆಯನ್ನು ಪುತ್ರ ರವಿ ಗುರುತಿಸಿ ನನ್ನ ತಾಯಿಯ ಬಟ್ಟೆ ಎಂದು ಗುರುತಿಸಿದ್ದು, ಮೃತಳು ಲಕ್ಷ್ಮೀದೇವಿಯೇ ಎಂದು ದೃಢೀಕರಿಸಿ ಶವವನ್ನು ವಿಧಿ ವಿಜ್ಞಾನ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ.

ಕೊಲೆ ಮಾಡಿದ್ದಾನೆ ಎನ್ನಲಾದ ಆರೋಪಿ ಈರಣ್ಣ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Leave a Comment