ನಾನೊಂದು ತೀರ …… ನೀನೊಂದು ತೀರ…… ದೋಸ್ತಿಗಳ ಸಂಕಟಕ್ಕೆ ಕನ್ನಡಿ ಹಿಡಿದ ಸಚಿವ

ಬೆಂಗಳೂರು, ಜ. ೩೦- ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಮತ್ತು ಮುಖಂಡರುಗಳ ನಡುವೆ ಅಪಸ್ವರ, ಕಿತ್ತಾಟ ಇರುವುದು ಸತ್ಯ ಎಂದು ಸಣ್ಣ ನೀರಾವರಿ ಸಚಿವ ಪುಟ್ಟರಾಜು ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಇತ್ತೀಚಿನ ದಿನಗಳಲ್ಲಿ ನಾನೊಂದು ತೀರ, ನೀನೊಂದು ತೀರ ಎನ್ನುವಂತಾಗಿದೆ. ಹೀಗಾಗಿಯೇ ನಿನ್ನೆ ನಡೆದ ದೆಹಲಿಯ ರಾಜ್ಯ ಪ್ರತಿನಿಧಿ ಅಜಯ್ ಸಿಂಗ್ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಜೆಡಿಎಸ್ ನಾಯಕರು ಗೈರು ಹಾಜರಾಗಿದ್ದರು ಎಂದು ಹೇಳಿದ್ದಾರೆ.

ಪುಟ್ಟರಾಜು ಅವರ ಈ ಹೇಳಿಕೆ ಕಾಂಗ್ರೆಸ್ – ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ.

ಕಾಂಗ್ರೆಸ್ ಶಾಸಕರು, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ಆಟ ಆಡುತ್ತಿದ್ದಾರೆ. ಇದರಿಂದಾಗಿ ಸಹಜವಾಗಿಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಪಾಳಯದಲ್ಲಿ ಅಸಮಾಧಾನ, ಅತೃಪ್ತಿ ಇದೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಏನಾದರೂ ಸಮಸ್ಯೆಗಳಿದ್ದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಕುಳಿತು ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಅದನ್ನು ಬಿಟ್ಟು ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರು, ತಮ್ಮ ನಾಯಕರನ್ನು ಖುಷಿಪಡಿಸಲು ಸಮ್ಮಿಶ್ರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಇಂತಹ ಶಾಸಕರನ್ನು ಕಾಂಗ್ರೆಸ್ ಹಿರಿಯ ನಾಯಕರು ನಿಯಂತ್ರಿಸಬೇಕು ಎಂದು ಹೇಳಿದರು.

ಪದೇಪದೇ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕರನ್ನು ಕೆಣಕಿದರೆ, ನಾವೂ ಕೂಡ ತಕ್ಕ ಉತ್ತರ ನೀಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.

Leave a Comment