ನಾನು ತಪ್ಪು ಮಾಡಿಲ್ಲ: ಅಮೂಲ್ಯ

ಬೆಂಗಳೂರು, ಫೆ.21 ­ ನಾನು ತಪ್ಪು ಮಾಡಿಲ್ಲ ಎಂದು ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾಳೆ.

ಗುರುವಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ “ಹಿಂದೂ-ಮುಸ್ಲಿಂ-ಸಿಖ್-ಇಸಾಯಿ ಫೆಡರೇಷನ್ ಬೆಂಗಳೂರು’ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ಪ್ರತಿಭಟನೆ ವೇಳೆ ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಳು.

ತಕ್ಷಣವೇ ಉಪ್ಪಾರಪೇಟೆ ಪೊಲೀಸರು ಆಕೆಯನ್ನು ಬಂಧಿಸಿ, ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆಕೆ ನಾನು ತಪ್ಪು ಮಾಡಿಲ್ಲ ಎಂಬ ಒಂದು ಹೇಳಿಕೆ ಬಿಟ್ಟರೇ, ಪೊಲೀಸರ ಮತ್ಯಾವುದೇ ಪ್ರಶ್ನೆಗೆ ಉತ್ತರಿಸಿಲ್ಲ. ಅಲ್ಲದೇ, ನನ್ನ ವಕೀಲರ ಬಳಿ ಮಾತನಾಡಿ ಬಳಿಕ ಪ್ರಶ್ನೆಗೆ ಉತ್ತರಿಸುವುದಾಗಿ ಹೇಳಿಕೆ ನೀಡಿದ್ದಾಳೆ ಎಂದು ತಿಳಿದು ಬಂದಿದೆ ‌‌.

ಅಮೂಲ್ಯ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಾದ ನಂತರ ರಾತ್ರೋರಾತ್ರಿ ಕೋರಮಂಗ‌ಲದ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ 5 ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಅಮೂಲ್ಯಳನ್ನು ಹಾಜರುಪಡಿಸಲಾಗಿತ್ತು.

ನ್ಯಾಯಾಧೀಶರಾದ ಶಿರಿನ್ ಜೆ ಅನ್ಸಾರಿ, ಅವರು ಅಮೂಲ್ಯಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ರಾತ್ರಿ 1.30ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ಕರೆತಂದಿದ್ದರು. ಸಾಮಾನ್ಯ ಕೈದಿಯಂತಿದ್ದ ಅಮೂಲ್ಯ ಮೇಲೆ ಸಹ ಕೈದಿಗಳಿಂದ ಹಲ್ಲೆಯಾಗುವ ಭೀತಿ, ಜೈಲಿನಲ್ಲಿ ಗಲಾಟೆಯಾಗುವ ಸಾಧ್ಯತೆ ಗಳಿರುವುದರಿಂದ ಜೈಲು ಅಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

ಪ್ರತಿಭಟನೆ ಆಯೋಜಕ ಜೆಡಿಎಸ್ ಕಾರ್ಪೋರೇಟರ್ ಇಮ್ರಾನ್ ಪಾಷಾ ಸೇರಿ ಹಲವರಿಗೆ ವಿಚಾರಣೆಗೆ ಹಾಜರಾಗುವಂತೆ ಉಪ್ಪಾರಪೇಟೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಇತ್ತ, ಅಮೂಲ್ಯ ಬಂಧನವಾಗುತ್ತಿದ್ದಂತೆ, ಆಕೆಯ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಿವಪುರ ಗ್ರಾಮದಲ್ಲಿರುವ ಆಕೆಯ ಮನೆಯ ಮೇಲೆ ರಾತ್ರಿ ಉದ್ರಿಕ್ತ ಗುಂಪೊಂದು ದಾಳಿ ನಡೆಸಿ, ಮನೆಯ ಕಿಟಕಿ, ಗ್ಲಾಸುಗಳ ಮೇಲೆ ಹೂ ಕುಂಡ ಎಸೆದು ಧ್ವಂಸಗೊಳಿಸಿದೆ.
ತಮ್ಮ ಮನೆ ಮೇಲೆ ರಾತ್ರೀ ರಾತ್ರಿ ದಾಳಿ ನಡೆದಿದ್ದರಿಂದ ಅಮೂಲ್ಯ ಅವರ ತಂದೆ ಓಸ್ರಲ್ಡ್ ನರೋನಾ ಕೊಪ್ಪ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮನೆಗೆ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.

ನಿನ್ನೆ ಪ್ರತಿಭಟನಾ ಸಭೆಯಲ್ಲಿ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪಾಲ್ಗೊಂಡಿದ್ದರು. ಅಮೂಲ್ಯಳ ಹೇಳಿಕೆಯನ್ನು ಅವರು ಖಂಡಿಸಿದ್ದರು.

Leave a Comment