ನಾಡೋಜ ಡಾ.ಗೀತಾ ನಾಗಭೂಷಣ ಪಂಚಭೂತಗಳಲ್ಲಿ ಲೀನ

 

ಕಲಬುರಗಿ,ಜೂ.29-ಕನ್ನಡದ ಖ್ಯಾತ ಕಾದಂಬರಿಗಾರ್ತಿ, ನಾಡೋಜ ಪ್ರಶಸ್ತಿ ಪುರಸ್ಕೃತ ಮೊದಲ ಮಹಿಳಾ ಲೇಖಕಿ ನಾಡೋಜ ಡಾ.ಗೀತಾ ನಾಗಭೂಷಣ (78) ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಗರ ಹೊರವಲಯದಲ್ಲಿರುವ ಸಾವಳಗಿ ಬಳಿಯ ಅವರ ಹೊಲದಲ್ಲಿ ಇಂದು ನೆರವೇರಿಸಲಾಯಿತು.

ಹಿರಿಯ ಸಾಹಿತಿಗಳು, ಲೇಖಕರು, ಸಾಹಿತ್ಯಾಭಿಮಾನಿಗಳು ಮತ್ತು ಗೀತಾ ನಾಗಭೂಷಣ ಅವರ ಕುಟುಂಬವರ್ಗದವರು ಹಾಗೂ ಬಂಧುಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ಗೀತಾ ನಾಗಭೂಷಣ ಅವರ ಹೋರಾಟದ ಬದುಕು, ಸಾಹಿತ್ಯ ಸೇವೆಯನ್ನು ನೆನೆದು ಅವರ ಅಭಿಮಾನಿಗಳು ಕಂಬನಿ ಮಿಡಿದರು. ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸುವುದರ ಮೂಲಕ ವಿದಾಯ ಹೇಳಿದರು.

ಭಾನುವಾರ ಸಂಜೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗೀತಾ ನಾಗಭೂಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳದರು. ಇಂದು ಮಧ್ಯಾಹ್ನ 12 ಗಂಟೆಯವರೆಗೆ ಸ್ವಸ್ತಿಕ್ ನಗರದಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು.

ನಾಡೋಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಗೀತಾ ನಾಗಭೂಷಣ ಅವರು, ಭಾರತೀಯ ಭಾಷಾ ಪರಿಷತ್ನ ಪ್ರಶಸ್ತಿ, ಕೇಂದ್ರ ಸಾಹಿತಿ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಮಹಿಳಾ ಸಾಹಿತಿ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದರು.

ಗದಗದಲ್ಲಿ ಆಯೋಜಿಸಿದ್ದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗೀತಾ ನಾಗಭೂಷಣ ಅವರು, ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.

ಅವರ ‘ಬದುಕು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದ್ದು, ಹಸಿಮಾಂಸ ಮತ್ತು ಹದ್ದುಗಳು (ಕಾದಂಬರಿ), ಅವ್ವ ಮತ್ತು ಇತರ ಕಥೆಗಳು (ಕಥಾಸಂಗ್ರಹ), ಸಪ್ತವರ್ಣದ ಹಾಡು, ದುರಗಮುರಗಿಯವರ ಸಂಸ್ಕೃತಿ (ಸಂಶೋಧನೆ), ಜ್ವಲಂತ (ಕಥಾಸಂಗ್ರಹ), ಜೋಗಿಣಿ (ನಾಟಕ), ನನ್ನ ಚೆಲುವು ನಿನ್ನ ಒಲವು ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಸಾವಳಗಿ ಎಂಬ ಪುಟ್ಟ ಹಳ್ಳಿಯಲ್ಲಿ  ಶಾಂತಪ್ಪ-ಶರಣಮ್ಮ ದಂಪತಿಗಳ ಉದದರಲ್ಲಿ 1942 ಮಾರ್ಚ್‌ 25ರಂದು ಜನಿಸಿದ ಗೀತಾ ನಾಗಭೂಷಣ ಅವರು, ಮೆಟ್ರಿಕ್ ಮುಗಿಸಿದ ನಂತರ ಕೆಲ ಕಾಲ ಕಲೆಕ್ಟರ್ ಕಚೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಬಿಎಡ್ ಮತ್ತು ಎಂಎ ಪದವಿಯನ್ನು ಗಳಿಸಿದ್ದರು.

ವಿದ್ಯಾಭ್ಯಾಸದ ವೇಳೆಯಲ್ಲಿ ಉದ್ಯೋಗ ಮಾಡುತ್ತಿದ್ದ ಗೀತಾ ನಾಗಭೂಷಣ ಎಂಎ ಪದವಿ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 3 ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಮೊಘಲಾಯಿ ಪರಿಸರದ ಪ್ರಮುಖ ಲೇಖಕಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ನಾಡೋಜ ಗೀತಾ ನಾಗಭೂಷಣ ಅವರು, ತಮಗಿದ್ದ ಕಿತ್ತು ತಿನ್ನುವ ಬಡತನ, ಅಸಹಕಾರಕ ಪರಿಸರ, ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವಗಳಿಂದ ಎದುರಿಸಿ ತಮ್ಮ ಎಡೆ ಬಿಡದ ಪರಿಶ್ರಮದಿಂದ ಬಿ.ಎ, ಬಿ.ಎಡ್, ಎಂ.ಎ ಪದವಿಗಳನ್ನು ಗಳಿಸಿ ಬಹುಕಾಲ ಅಧ್ಯಾಪನ ವೃತ್ತಿಯನ್ನೂ ನಡೆಸಿದವರು. ಜೊತೆಗೆ ತಮ್ಮ ಶಿಕ್ಷಕ ವೃತ್ತಿ, ಬರಹ ಪ್ರವೃತ್ತಿ ಮತ್ತು ನಡೆಗಳಿಂದ ಸಮಾಜಕ್ಕೆ ಬೆಳಕು ಕಾಣಿಸುವಲ್ಲಿ ಶ್ರಮಿಸಿದ್ದರು.

ಡಾ. ಗೀತಾ ನಾಗಭೂಷಣ ಅವರು 1968ರಲ್ಲಿ ಬರೆದ ‘ತಾವರೆಯ ಹೂವು ಕಾದಂಬರಿಯಿಂದ ಮೊದಲ್ಗೊಂಡು ಇತ್ತೀಚಿನ ‘ಬದುಕು ’ ಕಾದಂಬರಿಯವರೆಗೆ ಇಪ್ಪತ್ತೇಳು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅವರ ‘ಬದುಕು’ ಕಾದಂಬರಿಗೆ 2004ರ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. ಗೀತಾ ನಾಗಭೂಷಣರ ‘ಹಸಿಮಾಂಸ ಮತ್ತು ಹದ್ದುಗಳು’ ಎನ್ನುವ ಕಾದಂಬರಿಯು ಹೆಣ್ಣಿನ ಕೂಗು ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಒಟ್ಟು 27 ಸ್ವತಂತ್ರ ಕಾದಂಬರಿ, 50 ಸಣ್ಣ ಕಥೆಗಳು, ಎರಡು ಸಂಕಲನ, 12 ನಾಟಕಗಳು, ಒಂದು ಸಂಪಾದನಾ ಕೃತಿ, ಒಂದು ಸಂಶೋಧನಾ ಕೃತಿ ಹೀಗೆ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

ಕಂಬನಿ

ನಾಡೋಜ ಗೀತಾ ನಾಗಭೂಷಣ ಅವರ ನಿಧನಕ್ಕೆ ಹಲವಾರು ಜನ ಸಾಹಿತಿಗಳು, ಗಣ್ಯರು ಕಂಬನಿ ಮಿಡಿದಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಗೀತಾ ನಾಗಭೂಷಣ ಅವರು ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಒಬ್ಬ ಹಿರಿಯ ಲೇಖಕಿಯನ್ನು ಕಳೆದುಕೊಂಡು ಬಡವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ..

Share

Leave a Comment