ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಡಗರ…

ತುಮಕೂರು, ಆ. ೨೪- ಭಾಗ್ಯದ ಲಕ್ಷ್ಮೀ ಬಾರಮ್ಮ… ನಮ್ಮಮ್ಮ ಸೌಭಾಗ್ಯದ ಲಕ್ಷ್ಮೀ ಬಾರಮ್ಮ… ಈ ಹಾಡು ಇಂದು ಎಲ್ಲರ ಮನೆ ಮನಗಳಲ್ಲಿ ಮೊಳಗಿದ್ದು, ನಾಡಿನಾದ್ಯಂತ ಅಷ್ಟೈಶ್ವರ್ಯ ಸಿದ್ಧಿಸುವ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ನೆರೆಯ ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದ ಜಲ ಪ್ರಳಯದಿಂದಾಗಿ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಹಾಗೂ ದುಪ್ಪಟ್ಟು ಬೆಲೆ ಏರಿಕೆಯ ನಡುವೆಯೂ ಇಷ್ಟಾರ್ಥ ದಯಾಪಾಲಿಸುವ ವರಮಹಾಲಕ್ಷ್ಮಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದ್ದು, ಎಲ್ಲೆಡೆ ಸಡಗರ ಸಂಭ್ರಮ ಮನೆ ಮಾಡಿದೆ.
ಕೊಡಗು ಜಿಲ್ಲೆಯಲ್ಲಿ ನೆರೆಯಿಂದ ಮನೆ, ತೋಟ, ಜಮೀನು ಸೇರಿದಂತೆ ಎಲ್ಲವನ್ನೂ ಕಳೆದುಕೊಂಡು ಪುನಃ ನೆಲೆ ಕಂಡುಕೊಳ್ಳಲು ಅಲ್ಲಿನ ಜನ ಪರದಾಡುತ್ತಿದ್ದರೆ, ಕಲ್ಪತರುನಾಡು ತುಮಕೂರು ಜಿಲ್ಲೆಯ ಕೆಲ ಭಾಗಗಳಲ್ಲಿ ಮಳೆ ಇಲ್ಲದೆ ಗ್ರಾಮೀಣ ಪ್ರದೇಶಗಳ ರೈತ ಸಮೂಹ ತಮ್ಮ ಜಮೀನಲ್ಲಿ ಬಿತ್ತನೆ ಮಾಡಿರುವ ಬೆಳೆಯನ್ನು ಉಳಿಸಿಕೊಳ್ಳಲು ವರುಣನ ಕೃಪೆಗಾಗಿ ಕಾಯುತ್ತಿದ್ದಾರೆ. ಇನ್ನೊಂದೆಡೆ ರಾಜಕೀಯ ಪಕ್ಷಗಳ ನಾಯಕರು ಇವೆಲ್ಲದರ ಅರಿವೇ ಇಲ್ಲದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಇವೆಲ್ಲದರ ನಡುವೆ ಜನ ಬೆಲೆ ಎಷ್ಟೇ ದುಪ್ಪಟವಾದರೂ ಮಾರುಕಟ್ಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಿ ಅಷ್ಟೈಶ್ವರ್ಯ ಕಲ್ಪಿಸುವ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಕೊ‌ಡಗು ಜಿಲ್ಲೆಯಲ್ಲಿ ಮಳೆಯಿಂದ ಸಂಭವಿಸಿದ ಪ್ರವಾಹದಿಂದ ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ದೇವಾಲಯಗಳ ಬಳಿ ಅಗತ್ಯ ವಸ್ತುಗಳು, ನಗದನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸುವ ಮೂಲಕ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು.

ನಗರದ ಬಾರ್‌ಲೈನ್ ರಸ್ತೆಯಲ್ಲಿರುವ ಚಾಮುಂಡೇಶ್ವರಿ, ಬನಶಂಕರಿಯಮ್ಮ, ಹೊನ್ನು‌ಡಿಕೆ ಹ್ಯಾಂಡ್‌ಪೋಸ್ಟ್‌ನಲ್ಲಿರುವ ದುರ್ಗಪರಮೇಶ್ವರಿ ಸೇರಿದಂತೆ ಜಿಲ್ಲೆಯಾದ್ಯಂತ ಲಕ್ಷ್ಮೀ ದೇವಾಲಯಗಳಲ್ಲಿ ದೇವರುಗಳಿಗೆ ಬಗೆ ಬಗೆಯ ಹೂವುಗಳಿಂದ ವಿಶೇಷವಾಗಿ ಸಿಂಗರಿಸಲಾಗಿದ್ದು, ಪೂಜಾ ಕೈಂಕರ್ಯಗಳು ನೆರವೇರಿದವು.

ಸಂಪ್ರದಾಯದಂತೆ ಸುಮಂಗಲಿಯರು ಒಳ್ಳೆಯ ಗಳಿಗೆಯಲ್ಲಿ ವರಮಹಾಲಕ್ಷ್ಮಿಯನ್ನು ಪೂಜಿಸಬೇಕೆಂದು ಇಡೀ ರಾತ್ರಿ ನಿದ್ದೆ ಮಾಡದೆ ಲಕ್ಷ್ಮಿದೇವಿಯನ್ನು ತಮ್ಮ ತಮ್ಮ ಮನೆಗಳಲ್ಲಿ ಸಣ್ಣ ತಾಮ್ರದ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಳಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರು ತುಂಬಿಸಿ ಅದರ ಮೇಲೆ ತೆಂಗಿನ ಕಾಯಿ ಇಟ್ಟು ಅದಕ್ಕೆ ಲಕ್ಷ್ಮಿಅಮ್ಮನವರ ಬೆಳ್ಳಿ ಮುಖವಾಡ ಇಟ್ಟು, ಸೀರೆ ಉಡಿಸಿ, ಒಡವೆ, ಹೂವುಗಳಿಂದ ಸಿಂಗರಿಸುವ ಕಾರ್ಯದಲ್ಲಿ ನಿರತರಾಗಿದ್ದ ದೃಶ್ಯಗಳು ಕಂಡು ಬಂದವು.

ಬೆಳಗಿನ ಜಾವವೇ ವರಮಹಾಲಕ್ಷ್ಮಿಗೆ ಹಣ್ಣು ಹಂಪಲು, ಇತರೆ ತಿಂಡಿ-ತಿನಿಸು ಮತ್ತು ಖಾದ್ಯಗಳನ್ನು ನೈವೇದ್ಯಕ್ಕೆ ಇಟ್ಟು ಪೂಜೆ ಸಲ್ಲಿಸುವ ಮೂಲಕ ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಿಸಿದರು.

ತಮ್ಮ ಮನೆಗಳಲ್ಲಿ ವರಮಹಾಲಕ್ಷ್ಮಿಯನ್ನು ಕೂರಿಸಿ ಪೂಜೆ ಸಲ್ಲಿಸಿದ ನಂತರ ಸುಮಂಗಲಿಯರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪರಸ್ಪರ ಒಬ್ಬರಿಗೊಬ್ಬರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಜಿಲ್ಲೆಯಾದ್ಯಂತ ಸಾಮಾನ್ಯವಾಗಿತ್ತು.

ಇಷ್ಟಾರ್ಥಗಳನ್ನು ಸಿದ್ದಿಸುವ ವರಮಹಾಲಕ್ಷ್ಮಿ ಹಬ್ಬದಲ್ಲಿ ಮುತ್ತೈದೆಯರು ಮನೆಗಳಿಗೆ ಬಂದು ಅರಿಶಿನ-ಕುಂಕುಮ ಪಡೆದು ಹರಸಿದರೆ ಹಬ್ಬದ ಸಂಭ್ರಮದ ಇಮ್ಮಡಿಗೊಂಡು ಮಹಿಳೆಯರಲ್ಲಿ ಧನ್ಯತಾ ಭಾವ ಎದ್ದು ಕಾಣುತ್ತದೆ. ಅದರಂತೆ ಪ್ರತಿಯೊಬ್ಬರ ಮನೆಯಲ್ಲೂ ಸುಮಂಗಲಿಯರಿಗೆ ಅರಿಶಿನ-ಕುಂಕುಮ ನೀಡಿ ಅವರಿಂದ ಆಶೀರ್ವಾದ ಪಡೆಯುತ್ತಿದ್ದ ದೃಶ್ಯಗಳು ಸಹ ಕಂಡು ಬಂದವು.

ಈಗ ಹೇಳಿ ಕೇಳಿ ಶ್ರಾವಣ ಮಾಸ, ಶ್ರಾವಣ ಬಂತೆಂದರೆ ಹಬ್ಬಹರಿದಿನಗಳು ಶುರುವಾಗುತ್ತವೆ. ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗುತ್ತವೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿರುತ್ತದೆ. ಹಾಗೆಯೇ ವರಮಹಾಲಕ್ಷ್ಮಿ ಹಬ್ಬಕ್ಕೆ ಜನಸಾಮಾನ್ಯರಿಗೆ ಹೇಳಿಕೊಳ್ಳಲಾಗದಷ್ಟರ ಮಟ್ಟಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಇಂದಿನ ದುಬಾರಿ ದುನಿಯಾದಲ್ಲಿ ಹೂವು, ಹಣ್ಣುಗಳ, ಪೂಜಾ ಸಾಮಗ್ರಿಗಳು ಸೇರಿದಂತೆ ಯಾವುದೇ ವಸ್ತು ಖರೀದಿಸಿದರೂ ಜೇಬು ಖಾಲಿ.. ಖಾಲಿ.., ಒಂದು ಮಾರು ಕನಕಾಂಬರ, ಮಲ್ಲಿಗೆ ಹೂವಕ್ಕೆ 150 ರೂ., ಚಿಕ್ಕ ಹಾರಗಳು ಒಂದು ಜತೆ 150 ರೂ., ಬಾಳೆಹಣ್ಣು ಕೆ.ಜಿ.ಗೆ 80 ರೂ., ಸೇಬು, ದಾಳಿಂಬೆ, ಮೂಸಂಬಿ, ಕಿತ್ತಳೆ ಹೀಗೆ ಎಲ್ಲ ರೀತಿಯ ಹಣ್ಣುಗಳ ಬೆಲೆ ದುಬಾರಿಯಾಗಿವೆ. ಆದರೂ ಅಷ್ಟೈಶ್ವರ್ಯ ಸಿದ್ದಿಸುವ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲೇಬೇಕೆಂದು ಸುಮಂಗಲಿಯರು ಮಾರುಕಟ್ಟೆಯಲ್ಲಿ ಕಾಲಿಡಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸಹ ಒಳಗೆ ಹೋಗಿ ದುಬಾರಿ ಬೆಲೆ ತೆತ್ತು ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಹಬ್ಬ ಆಚರಿಸಿದ್ದು ವಿಶೇಷವಾಗಿತ್ತು.

ಪ್ರತಿ ವರ್ಷದಂತೆ ಈ ಬಾರಿಯೂ ವರಮಹಾಲಕ್ಷ್ಮಿ ಹಬ್ಬವಾದ ಇಂದು ಕೊರಟಗೆರೆ ತಾಲ್ಲೂಕು ಗೊರವನಹಳ್ಳಿ ಪುಣ್ಯ ಕ್ಷೇತ್ರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು.

ಬೆಂಗಳೂರು, ಮೈಸೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ನೆರೆಯ ಆಂಧ್ರದಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕಾರು, ದ್ವಿಚಕ್ರ ವಾಹನ, ಬಸ್‌ಗಳ ಮುಖೇನ ಗೊರವನಹಳ್ಳಿಗೆ ಆಗಮಿಸಿದ್ದು, ಇಡೀ ಗೊರವನಹಳ್ಳಿ ಭಕ್ತಾದಿಗಳಿಂದ ತುಂಬಿ ಹೋಗಿತ್ತು.

ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಅಮ್ಮನವರ ದರ್ಶನ ಪಡೆಯಲು ಜನಸಾಗರದ ದಟ್ಟಣೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ವಿಶೇಷ ಸರದಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯವನ್ನು ಐದಾರು ಸುತ್ತು ಸುತ್ತುವುದರ ಜತೆಗೆ ಗೊರವನಹಳ್ಳಿಗೆ ಪ್ರವೇಶ ಪಡೆಯುವ ದ್ವಾರ ಬಾಗಿಲವರೆಗೂ ಭಕ್ತರ ಸರದಿ ಸಾಲು ಬೆಳೆದಿತ್ತು.

ಇಂದು ಮುಂಜಾನೆಯಿಂದಲೇ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಇತ್ಯಾದಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದು, ಭಕ್ತಾದಿಗಳಿಗಾಗಿ ವಿಶೇಷ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಭಕ್ತಾದಿಗಳ ಸಂಖ್ಯೆ ಹೆಚ್ಚಿದಂತೆ ವಾಹನಗಳ ದಟ್ಟಣೆಯೂ ಜಾಸ್ತಿಯಾಗಿದ್ದು, ಕಿಲೋ ಮೀಟರ್ ಗಟ್ಟಲೆ ವಾಹನಗಳು ಚಲಿಸಲಾಗದೆ ನಿಂತಿದ್ದ ದೃಶ್ಯಗಳು ಕಂಡು ಬಂದವು. ದೂರದ ಊರುಗಳಿಂದ ಅಮ್ಮನವರ ದರ್ಶನಕ್ಕಾಗಿ ಬಂದಿದ್ದ ಮಹಿಳೆಯರು, ಮಕ್ಕಳು, ವೃದ್ಧರು ಟ್ರಾಫಿಕ್ ಜಾಮ್‌ನಿಂದ ಬೇಸತ್ತು ಹೋಗಿದ್ದರು. ಟ್ರಾಫಿಕ್ ಜಾಮ್ ಆದ ಕಾರಣ ಭಕ್ತಾದಿಗಳು ತಮ್ಮ ಕಾರು, ದ್ವಿಚಕ್ರ ವಾಹನಗಳನ್ನು 2-3 ಕಿ.ಮೀ. ದೂರದಲ್ಲಿ ನಿಲ್ಲಿಸಿ ನಡೆದುಕೊಂಡೆ ದೇವಾಲಯಕ್ಕೆ ಬಂದು ಅಮ್ಮನವರ ದರ್ಶನ ಪಡೆದು ಪುನೀತರಾದರು.
ಹಬ್ಬದ ಪ್ರಯುಕ್ತ ಇದು ದೇವಾಲಯದ ಆವರಣ ಹಾಗೂ ಅಮ್ಮನವರ ಗರ್ಭಗುಡಿಯನ್ನು ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಗಿತ್ತು.

ಗೊರವನಹಳ್ಳಿಗೆ ಬೆಳಿಗ್ಗೆಯಿಂದ ಸಂಜೆವರೆಗೂ ಹರಿದು ಬರುತ್ತಿದ್ದ ಭಕ್ತ ಸಾಗರವನ್ನು ನಿರ್ವಹಿಸುವಲ್ಲಿ ಹಾಗೂ ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಯಿತು.

ಕೊರಟಗೆರೆ ತಾಲ್ಲೂಕು ಆಡಳಿತದ ಅಧಿಕಾರಿಗಳು ಗೊರವನಹಳ್ಳಿಯಲ್ಲಿ ಮೊಕ್ಕಾಂ ಹೂಡಿದ್ದು, ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ಅಮ್ಮನವರ ದರ್ಶನ ಪಡೆಯಲು ವ್ಯವಸ್ಥೆ ಮಾಡಿದ್ದರು.

ಗೊರವನಹಳ್ಳಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾಗೋಪಿನಾಥ್ ಮತ್ತು ಅಡಿಷನಲ್ ಎಸ್ಪಿ ಡಾ. ಶೋಭರಾಣಿ ಅವರ ಮಾರ್ಗದರ್ಶನದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Leave a Comment