ನಾಗರಿಕ ಸಮಿತಿ ಸಭೆ : ನಗರ ಕುಂದು ಕೊರತೆಗಳ ಕುರಿತು ಚರ್ಚೆ

ದಾವಣಗೆರೆ ಡಿ.5;  ನಗರದ ರೇಣುಕಾ ಮಂದಿರದಲ್ಲಿ  ಮಹಾನಗರ ಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ ಇವರ ಅಧ್ಯಕ್ಷತೆಯಲ್ಲಿ ನಗರ ಉಪ ವಿಭಾಗದ ನಾಗರಿಕ ಸಮಿತಿ ಸಭೆ ನಡೆಯಿತು.

    ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್ ಪ್ರಾಸ್ತಾವಿಕವಾಗಿ ಮಾತನಾಡಿ, ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಇರುವ ಲೋಪ, ಕುಂದು ಕೊರತೆಗಳ, ನಗರದ ವಿವಿಧ ಭಾಗಗಳಲ್ಲಿ ಇರಬಹುದಾದ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಆದಷ್ಟು ನಿರ್ಧಿಷ್ಟವಾಗಿ ಸಭೆ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ನಾಗರಿಕ ಸಮಿತಿ ಸದಸ್ಯರು ಹಾಗೂ ಮುಖಂಡರಾದ ವೈ ಮಲ್ಲೇಶ್ ಮಾತನಾಡಿ, ನಗರದಲ್ಲಿ ಟ್ರಾಫಿಕ್ ಸಮಸ್ಯೆ ಇದೆ. ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆ ಆಗಬೇಕು. ಟ್ರಾಫಿಕ್ ಪೊಲೀಸರು ಕೇವಲ ಹೆಲ್ಮೆಟ್ ಕಡೆ ಗಮನ ಹರಿಸದೇ ಸಾರ್ವಜನಿಕರ ಸಮಸ್ಯೆಗಳ ಕುರಿತು ಗಮನ ಹರಿಸಬೇಕೆಂದರು.
ಹಿಂದು ಸಂಘಟನೆಯ ಮುಖಂಡ ಶಂಕರನಾರಾಯಣ ಮಾತನಾಡಿ, ನಗರದಲ್ಲಿ ಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಕಾಲೇಜುಗಳ ಬಳಿ ಮತ್ತು ಇತರೆ ಗೌಪ್ಯ ಸ್ಥಳಗಳಲ್ಲಿ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ. ಇದನ್ನು ತಪ್ಪಿಸಬೇಕು. ಹಾಗೂ ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಪುಂಡರ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಯಬೇಕು. ಹಾಗೂ ಫುಟ್‍ಪಾತ್ ವ್ಯಾಪಾರಸ್ಥರು ತೀರಾ ರಸ್ತೆಗೆ ಬಂದು ವ್ಯಾಪಾರ ನಡೆಸುತ್ತಿದ್ದಾರೆ. ಆದ್ದರಿಂದ ಪಾಲಿಕೆ ವತಿಯಿಂದಲೇ ಇವರಿಗೆ ನಿಗದಿತ ಸ್ಥಳ ಗುರುತಿಸಿ ನೀಡಿದಲ್ಲಿ ನಗರದ ಸೌಂದರ್ಯ ಹಾಗೂ ಪಾಲಿಕೆ ಆದಾಯವೂ ಆಗುತ್ತದೆ. ರಾತ್ರಿ ರಸ್ತೆಗಳಲ್ಲಿ ಕಳ್ಳರ ಕಾಟವೂ ಹೆಚ್ಚಾಗಿದೆ, ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳು ಜರುಗಿಸಬೇಕೆಂದು ಮನವಿ ಮಾಡಿದರು.
ಮುಸ್ಲಿಂ ಸಮಾಜದ ಮುಖಂಡ ಸೈಯದ್ ಸೈಫುಲ್ಲಾ ಮಾತನಾಡಿ ದಾವಣಗೆರೆ ಹಳೇ ಭಾಗದಲ್ಲಿ ಶಾಲಾ ಕಾಲೇಜು ಅವಧಿಯಲ್ಲಿ ಮಕ್ಕಳ ಓಡಾಟ ಕಷ್ಟವಾಗುತ್ತಿದೆ. ಈ ಭಾಗದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕೆಂದರು.
ಕೋಳಿ ಇಬ್ರಾಹಿಂ ಇವರು ಮಾತನಾಡಿ, ಬೀದಿ ಬದಿಯಲ್ಲಿ ತರಕಾರಿ ವ್ಯಾಪಾರಿಗಳಿಗೆ ಪರ್ಯಾಯ ವೃತ್ತಿಯಿಲ್ಲ. ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಿ ಸ್ಥಳಾಂತರಿಸಬೇಕೆಂದರು.  ಪಾಲಿಕೆ ಸದಸ್ಯರಾದ ಹಾಲೇಶಪ್ಪ ಮಾತನಾಡಿ, ಹಳೇ ನಗರದ ಅಂಬೇಡ್ಕರ್ ಸರ್ಕಲ್, ರುದ್ರಭೂಮಿ ಆ ಕಡೆಗಳಲ್ಲಿ ಹುಡುಗರ ಹಾವಳಿ ಹೆಚ್ಚಿದೆ. ಎಸ್‍ಎಸ್ ಲೇಔಟ್ ರಿಂಗ್ ರಸ್ತೆಯಲ್ಲಿ ರಾತ್ರಿ 8.30 ರ ನಂತರ ಗಲಾಟೆ ಸೆಟ್ಲ್‍ಮೆಂಟ್‍ಗೆ ಸೇರುತ್ತಾರೆ. ಈ ಕಡೆ ಗಮನ ಹರಿಸಬೇಕು ಹಾಗೂ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಟಿವಿಅಳವಡಿಸಬೇಕೆಂದರು.

ಅಮಾನುಲ್ಲಾ ಖಾನ್ ಇವರು ಮಾತನಾಡಿ, ವೃತ್ತ ವ್ಯಾಪ್ತಿಯಲ್ಲಿ ನಂತರ ಎಸ್‍ಪಿ ಯವರ ಹಂತದಲ್ಲಿ ಈ ಸಮಿತಿ ಸಭೆಗಳಾಗಬೇಕು. ಕಿಷ್ಕಿಂದೆ ರಸ್ತೆಗಳ ಬಳಿ ಪಾರ್ಕಿಂಗ್ ಹಾಗೂ ಟ್ರಾಫಿಕ್ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಅಶೋಕ ರಸ್ತೆ ಬಳಿಯ ರೇಲ್ವೇಗೇಟ್ ಸಮಸ್ಯೆ ಬಗೆಹರಿದರೆ ಶೇ.50 ಸಮಸ್ಯೆ ಬಗೆಹರಿದಂತಾಗುತ್ತದೆ. ಆದ್ದರಿಂದ ಈ ಕಡೆ ಹೆಚ್ಚಿನ ಗಮನ ಹರಿಸಬೇಕೆಂದರು.

ಉಪ ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, ಕೆಲ ಸಂಘ ಸಂಸ್ಥೆಗಳು ನೈತಿಕ ಪೊಲೀಸ್‍ಗಿರಿಯಲ್ಲಿ ತೊಡಗಿದ್ದು ಇದರ ವಿರುದ್ಧ ಕ್ರಮ ಜರುಗಿಸಬೇಕು. ಹಾಗೂ ನಗರದಲ್ಲಿ ಫ್ಲೆಕ್ಸ್ ಕಥೆ ದುರಂತವಾಗಿದ್ದು, ಫ್ಲೆಕ್ಸ್ ಅಳವಡಿಸಿದವರೇ ಅದರ ಜವಾಬ್ದಾರಿ ವಹಿಸುವಂತೆ ಮಾಡಬೇಕು. ಇನ್ನು ಅಶೋಕ ಟಾಕಿಸ್‍ನ ರೈಲ್ವೇ ಗೇಟ್ ಟ್ರಾಫಿಕ್ ನಿಯಂತ್ರಿಸಲು ಪುಷ್ಪಾಂಜಲಿ ಟಾಕಿಸ್ ಕಡೆಯಿಂದ ಬರುವ ವಾಹನಗಳಲ್ಲಿ ನಿಲ್ಲಿಸುವ ಕ್ರಮ ಕೈಗೊಳ್ಳಬೇಕೆಂದರು.
ನಗರದಲ್ಲಿ ಇಲಾಖೆ ವತಿಯಿಂದ 75 ರಿಂದ 80 ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿಯೂ ಸುಮಾರು 200 ಕ್ಯಾಮೆರಾ ಅಳವಡಿಸಲಾಗುವುದು. ಇತ್ತೀಚೆಗೆ ಸರ್ಕಾರ 100 ಜನ ಇರುವೆಡೆ ಹಾಗೂ 500 ಜನ ಸೇರುವ ಯಾವುದೇ ವ್ಯವಹಾರ ಇನ್ನಿತರೆ ಪ್ರದೇಶದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಆದೇಶಿಸಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು.
ಇನ್ನು ಹೆಲ್ಮೆಟ್ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಸಾರ್ವಜನಿಕರ ಪ್ರಾಣ ನಮಗೆ ಅಮೂಲ್ಯವಾಗಿದ್ದು, ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು. ಇನ್ನು ಫುಟ್‍ಪಾತ್ ವ್ಯಾಪಾರಿಗಳನ್ನು ಸುಗಮ ಸಂಚಾರಕ್ಕೆ ತೊಡಕು ಬಾರದಂತೆ ವ್ಯಾಪಾರ ನಡೆಸುವಂತೆ ಕ್ರಮ ಜರುಗಿಸಲಾಗುವುದು. ಕೆಟಿಜೆ ನಗರದಲ್ಲಿ ಒಂದು ಔಟ್‍ಪೋಸ್ಟ್‍ಗೆ ಸ್ಥಳ ನೋಡಿದ್ದು, ಇನ್ನು ಎರಡು ತಿಂಗಳಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.
ನೈತಿಕ ಪೊಲೀಸ್‍ಗಿರಿ ನಡೆಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ವಾಹನಗಳಲ್ಲಿ ಇಲಾಖೆಯವರು ಹಣ ವಸೂಲಿ ಮಾಡುತ್ತಿದ್ದಾರೆಂಬ ದೂರಿಗೆ ನಿರ್ದಿಷ್ಟವಾಗಿ ತಿಳಿಸಿದರೆ ಅಂತಹವ ವಿರುದ್ದ ಪ್ರಕರಣ ದಾಖಲಿಸಲಾಗುವುದು. ಇನ್ನು ಹದಡಿ ರಸ್ತೆ, ಗಾಂಧಿಸರ್ಕಲ್ ಇತರೆಡೆ ಸಿಗ್ನಲ್ ಅಳವಡಿಸುವ ಕುರಿತು ಹೇಳುವುದಾದರೆ ಸ್ಮಾರ್ಟ್‍ಸಿಟಿ  ಯೋಜನೆಯಡಿ ನಗರದ ಸುಮಾರು 22 ಕಡೆಗಳಲ್ಲಿ ವೈಜ್ಞಾನಿಕವಾಗಿ ಸಿಗ್ನಲ್ ಅಳವಡಿಕೆ ಕಾರ್ಯ ನಡೆಯಲಿದೆ. ಇನ್ನು ಶಾಲಾ-ಕಾಲೇಜು ಆವರಣದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಕಡಿವಾಣಕ್ಕೆ ಕೋಟ್ಪಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ವಹಿಸಲಾಗುವುದು, ಇನ್ನು ಬೀದಿದೀಪಗಳು ಇತರೆ ಸಮಸ್ಯೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿ ಇದಕ್ಕೆ ಎಲ್ಲ ನಾಗರೀಕರು ಸಹಕರಿಸಬೇಕೆಂದರು.
ಸಭೆಯಲ್ಲಿ ಎಎಸ್‍ಪಿ ಉದೇಶ್, ನಗರ ಉಪವಿಭಾಗಾದ ಡಿವೈಎಸ್‍ಪಿ ನಾಗರಾಜ್, ವೃತ್ತ ನಿರೀಕ್ಷಕರಾದ ಉಮೇಶ್, ಆನಂದ್ ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿಗಳು, ನಾಗರಿಕ ಸಮಿತಿಯ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.

Leave a Comment