ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ದಾಳಿಗೆ ಕುರಿಗಾಹಿ ಬಲಿ

ಮೈಸೂರು, ಮೇ 26 -ಹುಣಸೂರು ಸಮೀಪದ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ 65 ವರ್ಷ ವಯಸ್ಸಿನ ಕುರಿಗಾಹಿ ಹುಲಿಗೆ ಬಲಿಯಾಗಿದ್ದಾನೆ.
ಅರಣ್ಯ ಇಲಾಖೆ ಮತ್ತು ಸ್ಥಳೀಯ ಬುಡಕಟ್ಟು ಜನಾಂಗದವರು ನಿನ್ನೆ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಮಳೆಯಿಂದಾಗಿ ಕಾರ್ಯಾಚರಣೆ ನಿಂತಿತ್ತು. ಇಂದು ಕಾಡಿನಲ್ಲಿ ಅರ್ಧ ತಿಂದಿದ್ದ ವ್ಯಕ್ತಿಯ ದೇಹ ಪತ್ತೆಯಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಬಲಿಯಾದ ವ್ಯಕ್ತಿಯನ್ನು ಕಾಡಿನ ಅಂಚಿನಲ್ಲಿರುವ ನೆರಲಕುಪ್ಪೆ ಬಿ ಹಾಡಿಯ ನಿವಾಸಿ ಜಗದೀಶ್ ಎಂದು ಗುರುತಿಸಲಾಗಿದ್ದು, ಕುರಿಗಳನ್ನು ಮೇಯಿಸಲು ಕಾಡಂಚಿಗೆ ಹೋಗಿದ್ದರು. ನಿನ್ನೆ ಬೆಳಿಗ್ಗೆ ಮನೆಯಿಂದ ಕುರಿ ಮೇಯಿಸಲು ಹೋದ ವ್ಯಕ್ತಿ ತಮ್ಮ ಹಳ್ಳಿಗೆ ಹಿಂತಿರುಗಿರಲಿಲ್ಲ. ಆದರೆ ಮೇಕೆ ಮತ್ತು ಕುರಿಗಳು ಕೊಟ್ಟಿಗೆಗಳಿಗೆ ಹಿಂತಿರುಗಿದ್ದವು.
ವ್ಯಕ್ತಿಯ ಕುಟುಂಬದವರು ಹುಡುಕಾಟ ನಡೆಸಿದರಾದರೂ ಆತ ಪತ್ತೆಯಾಗಿರಲಿಲ್ಲ. ಕುರಿ ಮೇಯಿಸಲು ಸಾಮಾನ್ಯವಾಗಿ ಹೋಗುತ್ತಿದ್ದ ಹಂಡಿಹಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತನ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಹುಡುಕಿದಾಗ ಆತನ ಚಪ್ಪಲಿ, ಕುಡುಗೋಲು ಮತ್ತು ಕೋಲು ಪತ್ತೆಯಾಗಿದ್ದವು. ಜಾಗದಲ್ಲಿ ರಕ್ತದ ಕಲೆಗಳು ಸಹ ಕಂಡುಬಂದಿದ್ದವು.
ಜಗದೀಶ್‌ರನ್ನು ಹುಲಿ ಕಾಡಿಗೆ ಎಳೆದೊಯ್ಯಬಹುದೆಂದು ತಿಳಿದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಅಧಿಕಾರಿಗಳು ನಿನ್ನೆ ಸಂಜೆ ಶೋಧ ಕಾರ್ಯಾಚರಣೆ ನಡೆಸಿದ್ದರು.
ಶೋಧ ಕಾರ್ಯಾಚರಣೆಯಲ್ಲಿ ದಸರಾ ಉತ್ಸವದಲ್ಲಿ ಭಾಗವಿಸುವ ಆನೆಗಳಾದ ಬಲರಾಮ ಮತ್ತು ಗಣೇಶ, ಚಂದ್ರಿಕಾ ಮತ್ತು ಭೀಮಾ ಸೇರಿದಂತೆ ಇತರ ಐದು ಆನೆಗಳು ಭಾಗವಹಿಸಿದ್ದು, ವಲಯ ಅರಣ್ಯಾಧಿಕಾರಿ ಹನುಮಂತರಾಜು ನೇತೃತ್ವ ವಹಿಸಿದ್ದರು. ಆದರೂ, ನಿನ್ನೆ ಸಂಜೆ ಭಾರೀ ಮಳೆಯಾಗಿದ್ದರಿಂದ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಸ್ಥಗಿತಗೊಳಿಸಿ ಇಂದು ಬೆಳಿಗ್ಗೆ ಕಾರ್ಯಾಚರಣೆ ಮತ್ತೆ ಆರಂಭಿಸಿದ್ದರು.
ಹುಲಿಗಳ ಚಲನವಲನಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಸ್ಥಳೀಯ ಬುಡಕಟ್ಟು ಜನಾಂಗದವರು ಈ ಮೃತದೇಹವನ್ನು ಗುರುತಿಸಿದ್ದಾರೆ. ಒಟ್ಟಾರೆ 100 ಕ್ಕೂ ಹೆಚ್ಚು ಜನರು ಶೋಧ ಕಾರ್ಯಾಚರಣೆಯ ಭಾಗವಾಗಿದ್ದರು.
ಕಳೆದ ನಾಲ್ಕೈದು ದಿನಗಳಿಂದ ಹುಲಿ ಈ ಪ್ರದೇಶದಲ್ಲಿ ಓಡಾಡುತ್ತಿತ್ತು . ಕಾಡಿನೊಳಗೆ ಅಥವಾ ಹತ್ತಿರದ ಪ್ರದೇಶಗಳಿಗೆ ತೆರಳದಂತೆ ಇಲಾಖೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿತ್ತು.
ನಾಗರಹೊಳೆ ಹುಲಿ ರಕ್ಷಿತಾರಣ್ಯ ನಿರ್ದೇಶಕ ಮಹೇಶ್ ಕುಮಾರ್, ಸಹಾಯಕ ವಲಯ ಅರಣ್ಯಾಧಿಕಾರಿ ಪ್ರಸನ್ನ ಕುಮಾರ್, ಹುಣಸೂರು ಗ್ರಾಮೀಣ ಇನ್ಸ್‌ಪೆಕ್ಟರ್ ಶಿವಕುಮಾರ್ ಮತ್ತು ವಲಯ ಅರಣ್ಯಾಧಿಕಾರಿ ರವೀಂದ್ರ ಈ ಸ್ಥಳದಲ್ಲಿ ಬಿಡಾರ ಹೂಡಿದ್ದಾರೆ.

Share

Leave a Comment