ನವ ಕರ್ನಾಟಕ ನೀಲಿ ನಕ್ಷೆ ವಿಷನ್-2025 ಧ್ಯೇಯ

* 7 ವರ್ಷಗಳಲ್ಲಿ ಮುಕ್ತ ಅಭಿಪ್ರಾಯ ಸಂಗ್ರಹ
ರಾಯಚೂರು.ಅ.12- ನವ ಕರ್ನಾಟಕ ನೀಲಿ ನಕ್ಷೆ ಸಿದ್ದಪಡಿಸುವುದೇ ವಿಷನ್-2025ರ ಧ್ಯೇಯೋದ್ದೇಶವಾಗಿದ್ದು ಜನರ ಅಭಿಪ್ರಾಯ ಸಂಗ್ರಹಿಸಲು 7 ವರ್ಷ ಕಾಲಾವಕಾಶಬೇಕೆಂದು ವಿಷನ್-2025 ದಾಖಲಾತಿ ಪ್ರಾಜೆಕ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೇಣುಕಾ ಚಿದಂಬರಂ ಹೇಳಿದರು.
ಅವರಿಂದು ಜಿ.ಪಂ. ಸಭಾಂಗಣದಲ್ಲಿ ಕರ್ನಾಟಕ ವಿಷನ್-2025 ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ವಿಷನ್-2025 ಯೋಜನೆಯ ಮುಖ್ಯ ಉದ್ದೇಶ ಅಂಗವಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವುದಕ್ಕಾಗಿ ಕರ್ನಾಟಕ ವಿಷನ್-2025 ವೆಬ್‌ಸೈಟ್ ತೆರೆಯಲಾಗಿದೆ. ಇದರ ಜೊತೆಗೆ ಫೇಸ್‌ಬುಕ್, ಟ್ವಿಟ್ಟರ್ ಖಾತೆಯೂ ಸಹ ತೆರೆಯಲಾಗಿದೆಂದರು.
ಆನ್ ಲೈನ್ ಮೂಲಕ ಮುಂದಿನ ಏಳು ವರ್ಷಗಳಲ್ಲಿ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಕರ್ನಾಟಕ ವಿಷನ್ -2025 ರಾಜ್ಯದ ಪ್ರತಿ ನಾಗರೀಕ, ಕನ್ನಡಿಗರ ಭರವಸೆ, ಬಯಕೆಗಳ ನಿರೀಕ್ಷೆ ಪ್ರತಿಫಲಿಸಲಿದೆಂಬ ಮುಖ್ಯ ಉದ್ದೇಶ ಹೊಂದಲಾಗಿದೆ. ಈ ದಾಖಲಾತಿಯಿಂದ ಜನರಿಗೇನು ಸದುಪಯೋಗವೆನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ದಾಖಲಾತಿಗೆ ಮುಂದಾಗಲಾಗುವುದು.
ಇಡೀ ರಾಜ್ಯಾದ್ಯಂತ ಸಂಚರಿಸಿ ಆಯಾ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿ ಜನರಿಂದ ಅಭಿಪ್ರಾಯ ಆಲಿಸಲಾಗುವುದು. ಸರ್ಕಾರದ ನೀತಿ ನಿರ್ಧಾರಗಳನ್ನು ಪ್ರಕಟಿಸುವ ಶಕ್ತಿ ಕೇಂದ್ರವೆಂದೇ ಕರೆಯಲ್ಪಡುವ ವಿಧಾನಸೌಧದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಆದರೂ ಸ್ಥಳೀಯವಾಗಿ ಸಾರ್ವಜನಿಕರ ಅಪೇಕ್ಷೆಯಂತೆ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಳಿಸುವಲ್ಲಿ ಕೊಂಚ ಹಿನ್ನಡೆಯಾಗಿರುವ ಅಪಾದನೆ ಸ್ಥಳೀಯರಿಂದ ಕೇಳಿ ಬಂದಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಸಹಭಾಗಿತ್ವ ಅತ್ಯವಶ್ಯಕವಾಗಿರುವುದನ್ನು ಮನಗಂಡು ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿ, ಸಮುದಾಯ ಜನತೆ ಪಾಲುದಾರಿಕೆ ಇರಬೇಕೆಂದು ಭಾವಿಸಿ ಸಾರ್ವಜನಿಕರಿಂದ ಹಿಡಿದು ಚುನಾಯಿತ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಜನತೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಬಹುದೆಂದು ತಿಳಿಸಿದರು.

Leave a Comment