ನವೋದಯ ಶಿಕ್ಷಣ ಸಂಸ್ಥೆ ಕಾಲೇಜುಗಳ ಘಟಿಕೋತ್ಸವ

 ಯಶಸ್ಸು ಗುರಿಯಾಗದೇ ಸದಾ ಪ್ರಯಾಣವಾಗಿರಲಿ
ರಾಯಚೂರು.ಮೇ.16- ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸೇವೆಯಲ್ಲಿರುವ ಪ್ರತಿಯೊಬ್ಬರು ತಮ್ಮ ಕೆಲಸದಲ್ಲಿ ಆನಂದಿಸಬೇಕು ಎಂದು ಮಂಗಳೂರಿನ ಯನ್ನಪೋನಾ ಯುನಿವರ್ಸಿಟಿಯ ಉಪ ಕುಲಪತಿ ಡಾ.ಎಂ.ವಿಜಯಕುಮಾರ ಹೇಳಿದರು.
ಅವರು ನವೋದಯ ಶಿಕ್ಷಣ ಸಂಸ್ಥೆ ಸಿಲ್ವರ್ ಜೂಬ್ಲಿ ಆಚರಣೆಯ ಅಂಗವಾಗಿ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯಾತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಯಶಸ್ಸು ಯಾವಾಗಲೂ ಕೇವಲ ಒಂದು ಗುರಿಯಾಗಿರದೆ ಅದು ಸದಾ ಪ್ರಯಾಣವಾಗಿರಬೇಕೆಂದರು. ಬೇರೆ ಯವರೊಂದಿಗೆ ತನ್ನನ್ನು ಹೊಲಿಸದೇ ತಾನು ಸದೃಢವಾದ ನಿರ್ಧಾರಗಳಿಂದ ಮುನ್ನಡೆದು ಜೇವನದಲ್ಲಿ ಯಶಸ್ಸು ಪಡೆಯಬೇಕೆಂದರು.
ಶಕ್ತಿಮೀರಿ ಪ್ರಯತ್ನ ಪಟ್ಟು ನೀನು ಕೊಡಬಹುದಾದ ಶ್ರೇಷ್ಠ ಪ್ರಯತ್ನವನ್ನು ಸಮರ್ಪಿಸಿದರೆ ಅದು ಒಂದು ದಿನ ನಮಗೆ ಸರ್ವ ಶ್ರೇಷ್ಠವಾದುದನ್ನೇ ಕೊಡುತ್ತದೆ. ಆದ್ದರಿಂದ ನೀವು ಜೀವನದಲ್ಲಿ ಏನಾಗಬೇಕೆಂಬುದನ್ನು ಮೊದಲು ನಿರ್ಧರಿಸಿ ಅದೇ ಪ್ರಯತ್ನದಲ್ಲಿ ಮುಂದೆ ಹೋಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎನ್ಇಟಿ ಶಿಕ್ಷಣ ಸಂಸ್ಥೆಯ ಚೇರ್‌ಮನ್ ಎಸ್.ಆರ್.ರೆಡ್ಡಿ ಮಾತನಾಡಿ , ಸಂಸ್ಥೆಯು ನೀವು ನಿಮ್ಮ ಜೀವನದಲ್ಲಿ ಯಶಸ್ವಿಯಾಗಿ ಮುಂದುವರಿಯಲು ಸಮರ್ಪಕವಾದ ಅಡಿಪಾಯ ಹಾಕಿಕೊಟ್ಟಿದೆಂದರು.
ಪದವೀಧರರು ತಮ್ಮ ತಂದೆ – ತಾಯಿ ಪ್ರಯತ್ನ ಮತ್ತು ತ್ಯಾಗಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡು ಅವರನ್ನು ಗೌರವದೊಂದಿಗೆ ನೋಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಪದವಿ ಪಡೆದುಕೊಂಡ ಎಲ್ಲಾ ವಿದ್ಯಾರ್ಥಿಗಳು ತಮ್ಮ ಸುಖ ಜೀವನ ಮತ್ತು ವಾತಾವರಣದಿಂದ ಹೊರ ಬಂದು ನಿಜವಾದ ಜೀವನ ಏನು? ಎಂದು ತಿಳಿದುಕೊಳ್ಳಲು ಸದಾ ಪ್ರಯತ್ನಿಸಬೇಕೆಂದರು.
ಇದೇ ಸಂದರ್ಭದಲ್ಲಿ ಯುನಿವರ್ಸಿಟಿ ಱ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಬೆಸ್ಟ್ ಔಟ್‌ಗೋಯಿಂಗ್ ವಿದ್ಯಾರ್ಥಿಗಳಿಗೆ ಅಲ್ಲದೇ ಪ್ರತಿ ಕೋರ್ಸುಗಳಲ್ಲಿ ಕಾಲೇಜು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮೆಡಲ್ ಮತ್ತು ಸರ್ಟಿಫಿಕೇಟ್‌ಗಳನ್ನು ವಿತರಿಸಲಾಯಿತು. ಸಂಸ್ಥೆಯ ರಿಜಿಸ್ಟಾರ್ ಡಾ.ಟಿ.ಶ್ರೀನಿವಾಸ , ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ವಿಜಯಚಂದ್ರ, ಮೆಡಿಕಲ್ ಸುಪರಿಟೆಂಡೆಂಟ್ ಬ್ರಿಗೇಡಿಯ ಅಶೋಕ ಮಹೇಂದ್ರಕರ್, ವಿಜಯಕುಮಾರ ಡೈರಕ್ಟರ್ ಐ.ಪಿ. ಆಂಡ್ ಎಸ್.ಎ.ಹಾಗೂ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ವೇದಿಕೆಯ ಮೇಲಿದ್ದರು.

Leave a Comment