ನವಭಾರತಕ್ಕೆ ಕೊಡುಗೆ ನೀಡುವುದು ಪ್ರತಿ ಪ್ರಜೆಯ ಜವಾಬ್ದಾರಿ; ಮೋದಿ

ವಾರಾಣಸಿ, ಫೆ 16 – ನವಭಾರತದ ನಿರ್ಮಾಣಕ್ಕೆ ಕೊಡುಗೆ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಇಲ್ಲಿನ ಜಂಗಮವಾಡಿ ಮಠದಲ್ಲಿ ಜಗದ್ಗುರು ವಿಶ್ವರಾಧ್ಯ ಗುರುಕುಲದ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಅವರು, ದಶಕಗಳ ಕಾನೂನು ಸಮರದ ನಂತರ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಿದ್ದ ತೊಡಕು ನಿವಾರಣೆಯಾಗಿದೆ. ಸರ್ಕಾರ ದೇಗುಲ ನಿರ್ವಹಣೆಗಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಟ್ರಸ್ಟ್ ಕೂಡ ರಚನೆಯಾಗಿದೆ. ದೇಗುಲಕ್ಕಾಗಿ ಈ ಹಿಂದೆ ಸ್ವಾಧೀನಪಡಿಸಿಕೊಂಡಿರುವ 67 ಎಕರೆ ಜಮೀನನ್ನು ಟ್ರಸ್ಟ್ ಗೆ ಹಸ್ತಾಂತರಿಸಲಾಗುವುದು ಎಂದರು.

ಅಯೋಧ್ಯೆಯ ಜೊತೆಗೆ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಕೂಡ ನಿರ್ಮಿಸಲಾಗುವುದು. ಇದು ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯಗಳನ್ನು ಎತ್ತಿಹಿಡಿಯುತ್ತದೆ ಎಂದರು. ಪವಿತ್ರ ಗಂಗೆಯನ್ನು ಸ್ವಚ್ಛಗೊಳಿಸುವ ನಮಾಮಿ ಗಂಗಾ ಯೋಜನೆಯಲ್ಲಿ ಸಾಕಷ್ಟು ಜನರು ಪಾಲ್ಗೊಂಡಿದ್ದು, ಈಗಾಗಲೇ 7 ಸಾವಿರ ಕೋಟಿ ರೂ. ವೆಚ್ಚದ ಯೋಜನೆಯನ್ನು ಪೂರ್ಣಗೊಳಿಸಲಾಗಿದ್ದು, 21 ಸಾವಿರ ಕೋಟಿ ರೂ. ಯೋಜನೆ ಜಾರಿಯಲ್ಲಿದೆ ಎಂದು ಮಾಹಿತಿ ನೀಡಿದರು.
ದೇಶದ ಜನರು ಹೆಚ್ಚಾಗಿ ಸ್ಥಳೀಯ ವಸ್ತುಗಳನ್ನು ಬಳಸಬೇಕು. ದೇಶೀಯ ಉತ್ಪನ್ನಗಳಿಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಬೇಡಿಕೆ ಇದೆ ಎಂದರು.ಕಾರ್ಯಕ್ರಮಕ್ಕೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಇತರ ಸ್ಥಳಗಳಿಂದ ಜನರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ, 19 ಭಾಷೆಗಳಲ್ಲಿರುವ ಸಿದ್ದಾಂತ್ ಶಿಖಾಮಣಿ ಗ್ರಂಥ ಹಾಗೂ ಅದರ ಮೊಬೈಲ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದರು.
ಮಠ ಎಂಬುದು ಕರ್ನಾಟಕದ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುತ್ತದೆ ಎಂದು ಮೋದಿ, ಹಲವು ಕನ್ನಡದ ವಾಕ್ಯಗಳನ್ನು ಉಚ್ಚರಿಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಂಡಿದ್ದರು.

Leave a Comment