ನವತಾರೆಗಳಿಗೆ ಹಾರೈಕೆ ಭರಪೂರ

-ಚಿಕ್ಕನೆಟಕುಂಟೆ ಜಿ.ರಮೇಶ್
ಕಿಚ್ಚ ಸುದೀಪ್ ಸಮ್ಮುಖದಲ್ಲಿ ಆರ್‌ಡಿಎಕ್ಸ್ ಸ್ಪೋಟಿಸಲು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸದ್ದಿಲ್ಲದೆ ಸಿದ್ಧತೆ ನಡೆಸಿದ್ದರು. ಇದರ ಮಧ್ಯೆಯೇ ಹಿರಿಯ ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಸಿಡಿಸಿದ ಬಾಂಬ್ ಅಚ್ಚರಿ ಮತ್ತು ಕೆಲಕಾಲ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತು”
ಅರೆ ಏನಿದು ಎನ್ನುವ ಪ್ರಶ್ನೆ ಅಲ್ಲಿದ್ದವರಿಗೆ ಕಾಡದೇ ಇರಲಾರದು. ಅದಕ್ಕೆ ಕಾಯ್ಕಿಣಿ ಸಮಜಾಯಿಷಿಯನ್ನೂ ನೀಡಿ, ನಾಗಿಣಿ ಭರಣ ಮತ್ತು ನಾಗಾಭರಣ ದಂಪತಿಗೆ ಪನ್ನಗಭರಣ ಹುಟ್ಟಿಲ್ಲ. ಆತ ಸಿನಿಮಾ ಮತ್ತು ರಂಗಭೂಮಿ ಮದುವೆಗೆ ಹುಟ್ಟಿದ ಮಗು. ಬದುಕಿನ ಜೊತೆ ಸಿನಿಮಾ ಹುಟ್ಟಿದಾಗ ಒಳ್ಳೆಯ ಸಿನಿಮಾವಾಗುತ್ತದೆ ಎನ್ನುತ್ತಿದ್ದಂತೆ ಹೌರಾರಿದ ಮಂದಿ ಹಾಗೊಮ್ಮೆ ನಿಟ್ಟಿಸಿರು ಬಿಟ್ಟರು.
’ಹ್ಯಾಪಿ ನ್ಯೂ ಇಯರ್ ಚಿತ್ರದ ಮೂಲಕ ನಿರ್ದೇಶಕರಾಗಿ ಪನ್ನಗಭರಣ ಮತ್ತು ನಾಯಕಿಯಾಗಿ ಬಿ.ಸಿ ಪಾಟೀಲ್ ಅವರ ಪುತ್ರಿ ಸೃಷ್ಠಿ ಪಾಟೀಲ್ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಹೀಗಾಗಿ ಚಿತ್ರವನ್ನು ಮತ್ತು ಹೊಸ ಮುಖಗಳನ್ನು ಹರಸಿ ಹಾರೈಸಲು ಹಂಸಲೇಖ, ನಾಗಾಭರಣ,ಸುದೀಪ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಚಿತ್ರದ ಮೂಲಕ ಸಂಗೀತ ನಿರ್ದೇಶಕ ರಘು ದೀಕ್ಷಿತ್, ತಮ್ಮದೇ ಆದ ಆರ್‌ಡಿಎಕ್ಸ್ ಆಡಿಯೋ ಸಂಸ್ಥೆಯ ಮೂಲಕ ಚಿತ್ರದ ಧ್ವನಿಸುರುಳಿಯನ್ನು ಹೊರತಂದಿದ್ದಾರೆ. ಸರಿ ಸುಮಾರು ಮೂರು ಗಂಟೆಗಳಿಗೂ ಅಧಿಕ ಸಮಯ ನಡೆದ ಸಿಡಿ ಬಿಡುಗಡೆ ಮ್ಯಾರಾಥಾನ್‌ನಂತಿತ್ತು. ಶಿವ ಪೂಜೆಯಲ್ಲಿ ಕರಡಿ ಬಿಟ್ಟಂತೆ ನಿರೂಪಣೆ ಇತ್ತು. ನಿರೂಪಕ ಮಾತನಾಡುವ ಭರಾಟೆಯಲ್ಲಿ ಆಡಿದ ಮಾತುಗಳು ಸಂಗೀತ ದಿಗ್ಗಜ ಹಂಸಲೇಖ ಮತ್ತು ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಅವರಲ್ಲಿ ಅಸಮಾಧಾನಕ್ಕೂ ಅವಕಾಶ ಮಾಡಿಕೊಟ್ಟಿತ್ತು. ವೇದಿಕೆಯಲ್ಲಿ ಅವರು ಮುಟ್ಟಿ ನೋಡಿಕೊಳ್ಳುವಂತೆ ನಿರೂಪಕನಿಗೆ ಮಾತಿನಲ್ಲಿಯೇ ತಿರುಗಿಸಿ ಕೊಟ್ಟರು.
ಧ್ವನಿ ಸುರುಳಿ ಬಿಡುಗಡೆ ಮಾಡಿದ ಸುದೀಪ್, ಅಪ್ಪ ನಾಗಾಭರಣ ಅವರಿಗಿಂತ ಒಂದು ಹೆಜ್ಜೆ ಚಿತ್ರರಂಗದಲ್ಲಿ ರೀತಿ ಪನ್ನಗಭರಣ ಹೆಸರು ಮಾಡಲಿ, ಅದೇ ರೀತಿ ಸೃಷ್ಟಿ ಪಾಟೀಲ್ ಅವರಿಗೂ ಒಳ್ಳೆಯದಾಗಲಿ. ರಘು ಜೊತೆ ಕೆಲಸ ಮಾಡುವುದು ಖಷಿಯ ಕೆಲಸ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು.
ಯಾವುದೇ ಚಿತ್ರಕ್ಕೆ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ತುಂಬಾ ಮುಖ್ಯವಾದ್ದು. ಒಂದು ವೇಳೆ ಹಾಡಿಲ್ಲದಿದ್ದರೂ ನಡೆಯುತ್ತದೆ. ಆದರೆ ಹಿನ್ನೆಲೆ ಸಂಗೀತವಿಲ್ಲದೆ ಯಾವುದೇ ಚಿತ್ರ ಇರಲಾರದು. ರಘು ದೀಕ್ಷಿತ್ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ನಿರ್ಮಾಪಕ ಕಮ್ ನಟ ಬಿ.ಸಿ ಪಾಟೀಲ್, ೬ ವರ್ಷದ ಹಿಂದೆ “ಸಲ್ಯೂಟ್ ಚಿತ್ರ ಮಾಡಿದ ನಂತರ ಚಿತ್ರರಂಗಕ್ಕೆ ’ಸಲ್ಯೂಟ್ ಹೊಡೆದಿದ್ದೆ. ಈಗ ’ಹ್ಯಾಪಿ ನ್ಯೂ ಇಯರ್ ಮೂಲಕ ಮತ್ತೆ ಬಂದಿದ್ದೇನೆ. ಮಗಳನ್ನು ಚಿತ್ರರಂಗಕ್ಕೆ ಪರಿಚಯಸಿದ್ದೇನೆ.

ಆಕೆಗೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು. ಯಾವುದೇ ಚಿತ್ರ ಸೋತಾಗ ಅದು ಅನಾಥ, ಚಿತ್ರ ಗೆದ್ದಾಗ ಅದರ ಪಾಲು ತಮಗೂ ಸೇರಬೇಕೆಂದು ನೂರಾರು ಮಂದಿ ಬರುತ್ತಾರೆ. ’ಕೌರವ’ ಚಿತ್ರ ಮಾಡಿದಾಗ ಆಡಿಕೊಂಡವರೇ ಅಧಿಕ. ಚಿತ್ರ ಪೂರ್ಣಗೊಂಡು ಭರ್ಜರಿ ಯಶಸ್ಸು ಗಳಿಸಿದ್ದುದು ಈಗ ಇತಿಹಾಸ. ೬ ವರ್ಷಗಳ ಬಳಿಕ ಚಿತ್ರ ಮಾಡಲು ಹೊರಟಾಗ ಸಿಕ್ಕವರೇ ಪನ್ನಗಭರಣ. ಒಳ್ಳೆ ಸಿನಿಮಾ ಮಾಡಿದ್ದಾರೆ. ಯಶಸ್ವಿಯಾಗುತ್ತದೆ ಎನ್ನವ ವಿಶ್ವಾಸವಿದೆ. ಚಿತ್ರದ ಹಾಡುಗಳು ಮೊದ ಮೊದಲು ಅರ್ಥವಾಗಿರಲಿಲ್ಲ.
ಅರ್ಧ ಕೇಳಿಸುತ್ತಿದ್ದರು. ಹಾಡುಗಳನ್ನು ಮಾಡಿದ್ದಾರೋ ಇಲ್ಲವೋ ಎನ್ನುವ ಅನುಮಾನ ಮೂಡಿತ್ತು. ಇದಕ್ಕಾಗಿ ಸ್ಟುಡಿಯೋಗೆ ಹೋಗಿ ಹಾಡು ಕೇಳಿ ಖುಷಿ ಪಟ್ಟಿದ್ದೆ ಎಂದು ಹೇಳಿದರು.  ಹಂಸಲೇಖ ಮಾತನಾಡಿ, ರಘು ದೀಕ್ಷಿತ್, ಅಂಗಿ,ಲುಂಗಿ ಕಟ್ಟಿಕೊಂಡು ಬಾಯಲ್ಲಿ ಕನ್ನಡದ ಪುಂಗಿ ಊದುತ್ತಾ ಕನ್ನಡವನ್ನು ವಿಶ್ವಮಟ್ಟದಲ್ಲಿ ಪ್ರಚಾರ ಮಾಡಿದ್ದಾರೆ. ಅವರ ಜೊತೆಗೆ ಇಬ್ಬರು ಮಕ್ಕಳೂ ಚಿತ್ರರಂಗಕ್ಕೆ ಪರಿಚಯವಾಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹರಸಿದರು.
ಸಂಗೀತ ನಿರ್ದೇಶಕ ರಘು ದೀಕ್ಷಿತ್,ಚಿತ್ರದ ಹಾಡುಗಳನ್ನು ಪರಿಚಯಿಸುವ ಜೊತೆಗೆ ತಮ್ಮ ಜೊತೆ ಕೆಲಸ ಮಾಡಿರುವ ತಂತ್ರಜ್ಞರನ್ನೂ ಪರಿಚಯಿಸುವ ಮೂಲಕ ದೊಡ್ಡತನ
ತೋರಿದರು. ನಿರ್ಮಾಪಕಿ ವನಜಾ ಪಾಟೀಲ್, ನಟಿಯರಾದ ಸೃಷ್ಠಿ ಪಾಟೀಲ್, ಶೃತಿ ಹರಿಹರನ್, ಸೋನುಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ನಾಯಕರಲ್ಲಿಧನಂಜಯ್ ಹೊರತು ಪಡಿಸಿ ಮಿಕ್ಕವರು ಗೈರು ಹಾಜರಾಗಿದ್ದರು.
ಬಿ.ಪಿ ಪಾಟೀಲ್ ೬  ವರ್ಷದ ಬಳಿಕ ಚಿತ್ರರಂಗಕ್ಕೆ ವಾಪಾಸ್ಸಾಗುವ ಜೊತೆಗೆ ತಮ್ಮ ಪುತ್ರಿ ಸೃಷ್ಠಿ ಪಾಟೀಲ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರವನ್ನು ಯುಗಾದಿ ವೇಳೆಗೆ ತೆರೆಗೆ ತರುವ ಉದ್ದೇಶ ಚಿತ್ರತಂಡದ್ದು.

Leave a Comment