ನವಜಾತ ಹೆಣ್ಣು ಶಿಶು ಪತ್ತೆ

ರಾಯಚೂರು.ಜ.05- ನವಜಾತ ಹೆಣ್ಣು ಶಿಶುವೊಂದರ ಶವ ಸ್ಥಳೀಯ ಮಾವಿನ ಕೆರೆಯಲ್ಲಿ ಪತ್ತೆಯಾಗಿರುವ ಅಮಾನುಷ ಘಟನೆ ನಗರದಲ್ಲಿ ಜರುಗಿದೆ.
ಸ್ಥಳೀಯ ಮಾವಿನಕೆರೆ ದಡೆ ಮೇಲಿರುವ ನಗರ ಪ್ರಸೂತಿ ಆರೋಗ್ಯ ಕೇಂದ್ರದ ಮುಂಭಾಗದ ಮಾವಿನಕೆರೆಯಲ್ಲಿ ಹೆಣ್ಣು ಶಿಶುವೊಂದರ ಶವ ಪತ್ತೆಯಾಗಿದೆ. ಕಳೆದ ಎರಡು-ಮೂರು ದಿನಗಳಿಂದೆ ಹೆಣ್ಣು ಮಗುವೊಂದು ಜನಿಸಿತ್ತು. ಆದರೆ, ಹೆಣ್ಣು ಎಂಬ ಕಾರಣಕ್ಕೆ ಶಿಶುವನ್ನು ಮಾವಿನ ಕೆರೆಯಲ್ಲಿ ಬಿಸಾಡಿದ್ದಾರೆಯೇ ಎನ್ನುವ ಅನುಮಾನಗಳು ಇದೀಗ ವ್ಯಕ್ತಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಮದುವೆಯಾಗಿ ಸಂತಾನ ಲಭ್ಯವಾಗದ ಅನೇಕ ದಂಪತಿಗಳು ಮಕ್ಕಳ ಕೊರಗಿನಲ್ಲಿಯೇ ಬಳಲುತ್ತಿದ್ದರೆ, ಮತ್ತೊಂದೆಡೆ ಶಿಶುವೊಂದು ಕೆರೆಯಲ್ಲಿ ಪತ್ತೆಯಾಗಿರುವುದು ಖಂಡನೀಯ. ಮಕ್ಕಳನ್ನು ಪೋಷಿಸಿ, ಬೆಳೆಸಲು ಸಾಧ್ಯವಾಗದಿದ್ದಲ್ಲಿ ಅನಾಥಾಶ್ರಮ ಅಥವಾ ಮಕ್ಕಳಾಗದ ದಂಪತಿಗಳಿಗೆ ದತ್ತು ನೀಡಿದರೆ, ಮಗುವನ್ನು ಪೋಷಿಸಿ ಬೆಳೆಸಲು ಸಹಕಾರಿಯಾಗಲಿದೆ. ಆದರೆ, ಮಾವಿನ ಕೆರೆಯಲ್ಲಿ ಬಿಸಾಡಿರುವುದು ಅಕ್ಷಮ್ಯ ಅಪರಾಧವಾಗಿದೆ.
ಹೆಣ್ಣು ಶಿಶುವೊಂದರ ಶವ ಮಾವಿನಕೆರೆಯಲ್ಲಿ ಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿ, ಮಗುವನ್ನು ವೀಕ್ಷಿಸಿದರು. ಹೆಣ್ಣು ಶಿಶುವನ್ನು ಬಿಸಾಡಿರುವುದು ಯಾರು? ಎನ್ನುವುದನ್ನು ಪೊಲೀಸರ ತನಿಖೆಯಿಂದ ಮಾತ್ರ ಸತ್ಯ ಹೊರ ಬರಲಿದೆ.

Leave a Comment