ನರ್ಸ್, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಯತ್ನ: ದೂರು ನೀಡಿದರೆ ಕಾನೂನು ಕ್ರಮ- ಭಾಸ್ಕರ್ ರಾವ್

ಬೆಂಗಳೂರು, ಏ.2 – ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಸಮೀಕ್ಷೆ ಮಾಡಲು ತೆರಳಿದ್ದ ನರ್ಸ್, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಬುಧವಾರ ನಗರದ ಸಾರಾಯಿ‌ ಪಾಳ್ಯದ ಸಾಧಿಕ್ ಲೇಔಟ್ ನಲ್ಲಿ ನಡೆದಿದೆ.

ಕಳೆದ 15 ದಿನಗಳಿಂದ ನರ್ಸ್, ಆಶಾ ಕಾರ್ಯಕರ್ತೆಯರು ನೆಗಡಿ, ಕೆಮ್ಮು, ಜ್ವರ ಕುರಿತು ಜನರಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಬುಧವಾರ ಸಾಧಿಕ್ ಲೇಔಟ್ ಗೆ ತೆರಳಿದಾಗ ಆಶಾ ಕಾರ್ಯಕರ್ತೆ ಯರ ಬಳಿ ಇದ್ದ ವರದಿಯನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಾರೆ ಎನ್ನಲಾಗಿದೆ.

ಅಲ್ಲದೇ, ತಮ್ಮ ಮೊಬೈಲ್ ಫೋನ್ ಕಸಿದುಕೊಂಡು ಯಾರನ್ನು ಕರೆಯುತ್ತೀರಾ ಕರೆಯಿರಿ ಎಂದು ಬೆದರಿಕ ಹಾಕಿದ ದುಷ್ಕರ್ಮಿಗಳು, ತಮಗೆ ಯಾವುದೇ ಮಾಹಿತಿ,‌ ಮೊಬೈಲ್ ಸಂಖ್ಯೆ ನೀಡದಂತೆ ಮಸೀದಿಯ ಮೈಕ್ ನಲ್ಲಿ ಅನೌನ್ಸ್ ಮಾಡಿದ್ದಾರೆ ಎಂದು ಸ್ಥಳದಲ್ಲಿದ್ದ ಸಿಬ್ಬಂದಿ ಆರೋಪಿಸಿದ್ದಾರೆ.

ಅಲ್ಲದೇ, ಈ ಕುರಿತು ಮಾಹಿತಿ ನೀಡಿದಾಗ ಆರೋಗ್ಯ ಇಲಾಖೆಯ ಅಧಿಕಾರಿಗಳಾಗಲೀ, ಪೊಲೀಸರು ಸ್ಪಂದಿಸಿಲ್ಲ ಎಂದು ಆಶಾ ಕಾರ್ಯಕರ್ತೆಯೊಬ್ಬರು ಆರೋಪಿಸಿದ್ದಾರೆ.

ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯಿಸಿ, ಸಾಧಿಕ್ ಲೇಔಟ್ ನಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಲೇಔಟ್ ನಲ್ಲಿ‌ ಸರ್ವೇ ಮಾಡಲು‌ ನಿರ್ಧರಿಸಲಾಗಿತ್ತು. ಇದಕ್ಕೆ ಅಲ್ಲಿನ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು ಎಂದರು.

ಘಟನಾ ಸ್ಥಳಕ್ಕೆ ಹೊಯ್ಸಳ ಪೊಲೀಸರು ತೆರಳಿ, ಗುಂಪಾಗಿದ್ದ ಜನರನ್ನು ಚದುರಿಸಿದ್ದು,‌ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದರು‌.

ಈ ಕುರಿತು ಇದೂವರೆಗೂ ಯಾವುದೇ ದೂರು ದಾಖಲಾಗಿಲ್ಲ. ನರ್ಸ್, ಆಶಾ ಕಾರ್ಯಕರ್ತೆಯರು ದೂರು ನೀಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

Leave a Comment