ನರೇಗಾ ರಾಜ್ಯಕ್ಕೆ 1861 ಕೋ. ರೂ. ಕೇಂದ್ರ ಬಿಡುಗಡೆ

ಬೆಂಗಳೂರು, ಏ. ೭- ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ 1861 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ದೇಶದಲ್ಲಿ ಲಾಕ್‌ಡೌನ್ ಘೋಷಿಸಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ನೆರವಾಗಲು ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ 1861 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ ಕೂಲಿ ಕಾರ್ಮಿಕರಿಗೆ 1039 ಕೋಟಿ ರೂ. ಹಣ ಬಾಕಿ ಕೊಡಬೇಕಾಗಿದ್ದು, ಈ ಎಲ್ಲ ಬಾಕಿಗಳು ಚುಕ್ತಾ ಆದ ನಂತರ ರಾಜ್ಯ ಸರ್ಕಾರದ ಬಳಿ 7722 ಕೋಟಿ ರೂ. ಹಣ ಉಳಿಯಲಿದೆ. ಜತೆಗೆ ರಾಜ್ಯ ಸರ್ಕಾರದ 257 ಕೋಟಿ ರೂ. ಅನುದಾನವೂ ಇದ್ದು, ಮುಂದಿನ ದಿನಗಳಲ್ಲಿ ನರೇಗಾ ಕಾಮಗಾರಿಗಳು ಚುರುಕಾಗಲಿವೆ ಎಂದರು.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ನರೇಗಾ ಹಣ ಬಂದಿರುವುದರಿಂದ ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರಿಗೆ ಹಣ ಸಿಗಲಿದೆ ಎಂದು ಹೇಳಿದರು.
ಕೂಲಿ ಹೆಚ್ಚಳ
ರಾಜ್ಯದಲ್ಲೂ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ 275 ರೂ.ವರೆಗೂ ಕೂಲಿಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ನರೇಗಾ ಕಾಮಗಾರಿ ಸಂದರ್ಭದಲ್ಲಿ ಕೂಲಿ ಕಾರ್ಮಿಕರನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ದುಡಿಮೆಗೆ ಹಚ್ಚಲಾಗುವುದು. ಇದರಿಂದ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಕುಡಿವ ನೀರಿಗೆ ಹಣ
ರಾಜ್ಯದಲ್ಲಿ 49 ಬರ ಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗಾಗಿ ಪ್ರತಿ ತಾಲ್ಲೂಕಿಗೆ ತಲಾ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು. ರಾಜ್ಯದಲ್ಲಿ 49 ಬರ ಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಲು ಸರ್ಕಾರ ಎಲ್ಲ ಕ್ರಮ ಕೈಗೊಂಡಿದ್ದು, ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗಾಗಿ ಈ ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ. ಅಗತ್ಯ ಬಿದ್ದರೆ ಟ್ಯಾಂಕರ್‌ನಲ್ಲೂ ಕುಡಿಯುವ ನೀರನ್ನು ಒದಗಿಸಲಾಗುತ್ತದೆ ಎಂದು ಅವರು ಹೇಳಿದರು.

ಕೊರೊನಾ ತಡೆಗೆ ಗ್ರಾಮಗಳಲ್ಲೂ ಅಗತ್ಯ ಕ್ರಮ ಕೈಗೊಂಡು, ಪ್ರತಿ ಗ್ರಾಮಗಳಲ್ಲಿ ಕೊರೊನಾ ಜಾಗೃತಿ ಸಮಿತಿಗಳನ್ನು ರಚಿಸಲಾಗಿದೆ. ಹಾಗೆಯೇ ಗ್ರಾಮ ಪಂಚಾಯ್ತಿಗಳಲ್ಲಿ ಕೊರೊನಾ ಟಾಸ್ಕ್‌ಫೋರ್ಸ್‌ಗಳನ್ನು ರಚನೆ ಮಾಡಿದ್ದೇವೆ ಎಂದರು.

Leave a Comment