ನರೇಗಾ ನಿಯಮ ಉಲ್ಲಂಘನೆ ಹನ್ನೆರೆಡು ಗ್ರಾಪಂ ಅಧ್ಯಕ್ಷರ ಅನರ್ಹತೆಗೆ ಶಿಫಾರಸ್ಸು

ಬಳ್ಳಾರಿ, ಸೆ.8: ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಜಾಬ್‍ಕಾರ್ಡ್ ಬಳಸದೇ ಗುತ್ತಿಗೆದಾರರ ಮೂಲಕ ಕೆಲಸ ಮಾಡಿರುವುದು, ಯಂತ್ರಗಳ ಬಳಕೆ ಸೇರಿದಂತೆ ನಿಯಮಗಳನ್ನು ಉಲ್ಲಂಘಿಸಿ ಕೆಲಸ ಮಾಡಿರುವುದರ ಆಧಾರದ ಮೇಲೆ ಜಿಲ್ಲೆಯ 12 ಗ್ರಾಪಂ ಗಳ ಅಧ್ಯಕ್ಷರನ್ನು ಅನರ್ಹತೆಗೊಳಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ.

ಗ್ರಾಮೀಣ ಮಟ್ಟದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಗ್ರಾಮೀಣ ಮಟ್ಟದ ಸಾರ್ವಜನಿಕರಿಗೆ ಅವಶ್ಯವಿರುವ ಹಾಗೂ ದೀರ್ಘಕಾಲ ಬಾಳಿಕೆ ಬರುವ ಆಸ್ತಿ ಸೃಜನೆ ಕಾಮಗಾರಿಗಳ ಅನುಷ್ಠಾನದಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳುವಿಕೆ ಕುರಿತು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನರೇಗಾ ಅಡಿ ಜಾಬ್ ಕಾರ್ಡ್ ಇಲ್ಲದೇ ಕೆಲಸ ಮಾಡಿದರೇ, ಯಂತ್ರೋಪಕರಣ ಮತ್ತು ಗುತ್ತಿಗೆದಾರರು ಬಳಸಿದರೇ ಕ್ರಿಮಿನಲ್ ಕೇಸ್ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ನೀವು ಏನೇ ಕೆಲಸ ಮಾಡಿ, ಅದು ನಿಧಾನವಾದರೂ ಪರವಾಗಿಲ್ಲ. ನರೇಗಾದ ನಿಯಮಗಳನ್ನು ಉಲ್ಲಂಘಿಸದಂತಿರಲಿ. ಗ್ರಾಮೀಣ ಮಟ್ಟದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಗ್ರಾಮೀಣ ಮಟ್ಟದ ಸಾರ್ವಜನಿಕರಿಗೆ ಅವಶ್ಯವಿರುವ ಹಾಗೂ ದೀರ್ಘಕಾಲ ಬಾಳಿಕೆ ಬರುವ ಆಸ್ತಿ ಸೃಜನೆ ಕಾಮಗಾರಿಗಳ ಅನುಷ್ಠಾನ ಮಾಡುವುದಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂಬ ಅಭಿಪ್ರಾಯಗಳನ್ನು ಕಾರ್ಯಾಗಾರದಲ್ಲಿ ವ್ಯಕ್ತಪಡಿಸಿದ ಅವರು, ನರೇಗಾ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಸಮರ್ಪಕವಾಗಿ ಅನುಷ್ಠಾನ ಮಾಡುವುದರ ಮೂಲಕ ಗ್ರಾಮಗಳ ಅಭಿವೃದ್ಧಿ ಮಾಡಲು ಜನಪ್ರತಿನಿಧಿಗಳು ಮುಂದಾಗಬೇಕು. ಎಲ್ಲೆಲ್ಲಿ ಚೆಕ್ ಡ್ಯಾಂಗಳನ್ನ ನಿರ್ಮಾಣ ಮಾಡಿದರೇ ಅಂತರ್ಜಲಮಟ್ಟ ಹೆಚ್ಚಾಗುತ್ತದೆ ಎಂಬುದನ್ನು ಈಗಾಗಲೇ ಸೆಟ್‍ಲೈಟ್ ಮೂಲಕ ಸರ್ವೆ ನಡೆಸಿ ಮಾಹಿತಿ ತರಿಸಿಕೊಳ್ಳಲಾಗಿದೆ. ಅಂತ ಕಡೆಗಳೆಲ್ಲೆಲ್ಲಾ ನರೇಗಾ ಯೋಜನೆ ಅಡಿ ಮಲ್ಟಿಚೆಕ್‍ಡ್ಯಾಂಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದೆಂದರು.

ನಮ್ಮ ಸರಕಾರಿ ಶಾಲೆಗಳಿಗೆ ಕಂಪೌಂಡ್ ವಾಲ್, ಶೌಚಾಲಯ, ಕೈತೋಟ ಸೇರಿದಂತೆ ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯಗಳಂತ ಸೌಲಭ್ಯಗಳನ್ನು ಕಲ್ಪಿಸುವ ಅವಕಾಶ ಖಾತರಿ ಯೋಜನೆ ಅಡಿ ಇದ್ದು,ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ ಎಂದು ಹೇಳಿದ ಜಿಪಂ ಸಿಇಒ ಅವರು, ಕಂಪೌಂಡ್,ಶೌಚಾಲಯ ಸೇರಿದಂತೆ ವಿವಿಧ ಕಾಮಗಾರಿಗಳ ಅನುಷ್ಠಾನ ವಿಷಯದಲ್ಲಿ ಅಂದಾಜು ಪಟ್ಟಿಗಳು ನೀಡಿರುವುದು ನಮ್ಮ ಮಾರ್ಗದರ್ಶನಕ್ಕೆ ಹೊರತು ಅದುವೇ ಅಂತಿಮವಲ್ಲ; ಅದನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಪಾಟು ಮಾಡಿ ಕೆಲಸ ಕೈಗೆತ್ತಿಕೊಳ್ಳಬೇಕು. ದನದಕೊಟ್ಟಿಗೆ,ಕುರಿದೊಡ್ಡಿಗಳ ನಿರ್ಮಾಣ,ರೈತಸಿರಿ ಅಡಿ ಸಸಿಗಳ ವಿತರಣೆ ಮತ್ತು ನಾಟಿ, ಸರಕಾರದ ಜಾಗ ಲಭ್ಯವಿರುವೆಡೆ ಸಾಮಾಜಿಕ ಅರಣ್ಯ ವಿಭಾಗದಿಂದ ಗಿಡ ನೆಡುವಿಕೆ ಸೇರಿದಂತೆ ವಿವಿಧ ರೀತಿಯ ದೀರ್ಘಕಾಲ ಬಾಳಿಕೆ ಬರುವಂತ ಆಸ್ತಿಸೃಜನೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರು ಮಾತನಾಡಿ, ಜನರಿಗೆ ಕೆಲಸ ನೀಡಿ,ಗುಳೆ ಹೋಗುವುದಕ್ಕೆ ತಡೆಹಿಡಿಯುಂತೆ ಮಾಡುವ ಮಹಾನ್ ಉದ್ದೇಶ ನರೇಗಾ ಯೋಜನೆಗಿದ್ದು, ಅಧಿಕಾರಿಗಳು ಅದನ್ನರಿತು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ದೀರ್ಘಬಾಳಿಕೆ ಬರುವಂತ ಆಸ್ತಿಗಳು ಸೃಜನೆ ಮಾಡುವುದಕ್ಕೆ ಮುಂದಾಗಬೇಕು ಎಂದರು ಜಿಪಂ ಸದಸ್ಯೆ ರಾಧಾ ಧರಪ್ಪ ನಾಯಕ್, ತಾಪಂ ಅಧ್ಯಕ್ಷೆ ರಮೀಜಾ ಬೀ, ಮೊದಲಾದವರು ಪಾಲ್ಗೊಂಡಿದ್ದರು.

Leave a Comment