ನರಗನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಂದ ಇಂಗ್ಲೀಷ್ ರಂಗೋತ್ಸವ

ದಾವಣಗೆರೆ, ಫೆ. 12 – ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಕಾಲ ಇದು. ಇಂತಹ ಕಾಲದಲ್ಲೂ ಸರ್ಕಾರಿ ಶಾಲಾ ಮಕ್ಕಳ ಕಲಿಕಾ ಗುಣಮಟ್ಟ ಚನ್ನಾಗಿದೆ ಎಂದರೆ ನಿಜಕ್ಕೂ ಈ ಶಾಲೆ ಮಾದರಿ ಶಾಲೆ. ದಾವಣಗೆರೆ ತಾಲ್ಲೂಕಿನ ನರಗನಹಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಖಾಸಗಿ ಶಾಲೆಗಿಂತ ಉತ್ತಮವಾಗಿದೆ. ಇದಕ್ಕೆ ನಿದರ್ಶನ ಇಲ್ಲಿನ ಮಕ್ಕಳ ಶೈಕ್ಷಣಿಕ ಗುಣಮಟ್ಟ. 1ನೇ ತರಗತಿಂದ 7ನೇ ತರಗತಿವರೆಗೆ ಇಲ್ಲಿನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಲ್ಲಾ ಮಕ್ಕಳು ಇಂಗ್ಲೀಷ್ ಭಾಷೆಯನ್ನ ಸರಳವಾಗಿ ಮಾತನಾಡುತ್ತಾರೆ. ಅಷ್ಟೇಅಲ್ಲಾ, ಪಠ್ಯಾಧರಿತ ಪಾತ್ರಾಭಿನಯ ಮಾಡುತ್ತಾರೆ. ಇಂಗ್ಲಿಷ್ ಕಬ್ಬಿಣದ ಕಡಲೆ ಎನ್ನುವ ಮಾತಿದೆ ಆದರೆ ಇಲ್ಲಿನ ಮಕ್ಕಳು ಸರಳವಾಗಿ ಸುಲಭವಾಗಿ ಇಂಗ್ಲೀಷ್ ಮಾತಾಡುತ್ತಾರೆ. ಈ ಮಕ್ಕಳು ಇಂಗ್ಲೀಷ್ ರಂಗೋತ್ಸವ ಮಾಡುವ ಮೂಲಕ ಖಾಸಗಿ ಶಾಲಾ ಮಕ್ಕಳಿಗಿಂತ ನಾವೇನು ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಸುಮಾರು ೨೦ ಕ್ಕೂ ಅಧಿಕ ವಿದ್ಯಾರ್ಥಿಗಳು ಇಂಗ್ಲಿಷ್‌ಲ್ಲೇ ಮಾತಾಡುವ ಮೂಲಕ ಎಲ್ಲರನ್ನ ನಿಬ್ಬೆರಗು ಮಾಡಿದ್ದಾರೆ.
ಈ ರೀತಿ ಮಕ್ಕಳು ಇಂಗ್ಲೀಷ್ ಭಾಷೆಯನ್ನ ಸುಲಭವಾಗಿ ಕಲಿಯುವಲ್ಲಿ ಆ ಶಾಲೆಯ ಆಂಗ್ಲ ಭಾಷೆ ಶಿಕ್ಷಕ ಕೊಡಗನೂರು ಪ್ರಕಾಶ್ ಅವರ ಶ್ರಮ ಅಪಾರ. ಮಕ್ಕಳಿಗೆ ಅವರು ಅತ್ಯಂತ ಸುಲಭವಾಗಿ ಇಂಗ್ಲೀಷ್ ಭಾಷೆಯನ್ನ ಕಲಿಸಿದ್ದಾರೆ. ಶಾಲೆಯೊಳಗೆ ಮಕ್ಕಳಂತೆ ಇದ್ದು ಪಠ್ಯವನ್ನ ಕಲಿಕೆ ಮೂಲಕ ತಿಳಿಸಿದರೆ ಅವರು ಕಲಿಯುತ್ತಾರೆ ಎಂಬುದು ಶಿಕ್ಷಕ ಕೊಡಗನೂರು ಪ್ರಕಾಶ್ ಅವರ ಅಭಿಪ್ರಾಯ. ಹಳ್ಳಿಗೊಂದು ಕಾನ್ವೆಂಟ್‌ಗಳಾಗಿವೆ, ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿವೆ. ಇಂಥ ಕಾಲದಲ್ಲೂ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿರುವುದು ನಿಜಕ್ಕೂ ಶ್ಲಾಘನೀಯ. ಅಲ್ಲದೇ, ಈ ಮಕ್ಕಳಿಗೆ ಇಂಗ್ಲಿಷ್ ಎಂಬ ಭಯದಿಂದ ದೂರ ಮಾಡಿದ ಶಿಕ್ಷಕ ವರ್ಗದ ಶ್ರಮ.. ಈ ಮಕ್ಕಳ ಉತ್ತಮ ಭವಿಷ್ಯಕ್ಕೆ ದಾರಿಯಾಗಿದೆ. ಏನೇ ಆಗಲಿ ಹಳ್ಳಿಯ ಸರ್ಕಾರಿ ಶಾಲೆ ಮಕ್ಕಳು ಆಂಗ್ಲ ಭಾಷೆ ಕಲಿಕೆ ಎಲ್ಲರಿಗೂ ಮಾದರಿಯಾಗಿದೆ.

Leave a Comment