ನಮ್ಮ ನಡಿಗೆ ಮಹಾತ್ಮಾ ಗಾಂಧಿ ಕಡೆಗೆ 30 ರಂದು

=

ಕಲಬುರಗಿ ಜ 28:ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹುತಾತ್ಮರ ದಿನವಾದ ಜನವರಿ 30 ರಂದು ನಗರದಲ್ಲಿ ನಮ್ಮ ನಡಿಗೆ ಮಹಾತ್ಮಾ ಗಾಂಧಿ ಕಡೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸುವ ಕಾರ್ಯಕರ್ತರು,ನಗರದ ಸೇಡಂ ರಿಂಗ್ ರಸ್ತೆ, ಶಹಬಾಜಾರ್ ನಾಕಾ, ಸರದಾರ ವಲ್ಲಭಬಾಯಿ ಪಟೇಲ್ ವೃತ್ತ ಮೊದಲಾದ ಕಡೆಗಳಿಂದ ಸಾರ್ವಜನಿಕ ಉದ್ಯಾನದಲ್ಲಿರುವ ಗಾಂಧಿ ಪ್ರತಿಮೆಯ ತನಕ ಪಾದಯಾತ್ರೆಯ ಮೂಲಕ ಆಗಮಿಸುವರು. ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಜಗತ್ ವೃತ್ತದ ಹತ್ತಿರ ಮಧ್ಯಾಹ್ನ 12 ಗಂಟೆಗೆ ಬಹಿರಂಗ ಸಭೆ ನಡೆಯಲಿದೆ.ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.

ಯುವ ಜನಾಂಗಕ್ಕೆ ಮಹಾತಾಗಾಂಧಿ ಅವರ ತತ್ವ ಆದರ್ಶ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.ಕೆಲವು ಪಕ್ಷ ಸಂಘಟನೆಗಳಿಂದ ಗೋಡ್ಸೆ ವೈಭವೀಕರಣ ನಡೆದಿದ್ದು ಮೂರ್ಖತನದ         ಪರಮಾವಧಿಯಾಗಿದೆ.ಸಾಮಾಜಿಕ ಜಾಲತಾಣಗಳ ಮೂಲಕ ಗಾಂಧಿ,ನೆಹರೂ ಅವರ ಅವಹೇಳನ ನಡೆದಿದ್ದು ಯುವಜನಾಂಗಕ್ಕೆ ನಿಜ ಇತಿಹಾಸ ತಿಳಿಸುವದು ನಮ್ಮ ಉದ್ದೇಶವಾಗಿದೆ ಎಂದರು

ಅರಾಜಕತೆ:

ಜಿಲ್ಲೆಯಲ್ಲಿ ಅರಾಜಕತೆ ತಲೆ ಎತ್ತಿದೆ.ಬಿಜೆಪಿ ಸರ್ಕಾರ ಹೈಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಅಂತ ಹೆಸರಿಟ್ಟು ಕಲ್ಯಾಣ ಕರ್ನಾಟಕದ ಕೊಲೆ ಮಾಡುತ್ತಿದೆ.ತೊಗರಿ ಬೆಳೆಗಾರರ ಅಳಲು ಯಾರೂ ಕೇಳುತ್ತಿಲ್ಲ.ಕೆಕೆಆರ್‍ಡಿಬಿ ಗೆ ಅನುದಾನ ಬಿಡುಗಡೆಯಾಗಿಲ್ಲ.ಎಲ್ಲ ಇಲಾಖೆಗಳಲ್ಲಿ ಟೆಂಡರ್ ಫಿಕ್ಸಿಂಗ್ ನಡೆದಿದೆ.ಉಸುಕಿನ ದಂಧೆ ನಿಂತಿಲ್ಲ.ನಗರದಲ್ಲಿ ಜೂಜು ಅಡ್ಡೆಗಳು ತಲೆ ಎತ್ತುತ್ತಿವೆ.ಇದರಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ ಎಂದು ದೂರಿದರು

ಸುದ್ದಿಗೋಷ್ಠಿಯಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ,ಶಿವಾನಂದ ಪಾಟೀಲ,ಸಿದ್ಧರಾಮ ಪ್ಯಾಟಿ ಉಪಸ್ಥಿತರಿದ್ದರು..

Leave a Comment