ನಮಸ್ಕಾರ ನಮ್ಮ ಸಂಸ್ಕಾರ- ವಿದ್ಯಾರ್ಥಿಗಳಿಗೆ ನಾಯ್ಡು ನೈತಿಕ ಪಾಠ

ಹುಬ್ಬಳ್ಳಿ,ಫೆ2: ನಮಸ್ಕಾರ ಎಂಬುವುದು ನಮ್ಮ ಭಾರತೀಯ ಸಂಸ್ಕಾರ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
ನಗರದಲ್ಲಿಂದು  ಗೋಕುಲ ರಸ್ತೆಯ ದೇಶಪಾಂಡೆ ಫೌಂಡಶನ್ ಆವರಣದಲ್ಲಿ ನಿರ್ಮಾಣಗೊಂಡ ದೇಶಪಾಂಡೆ ಕೌಶಲ್ಯ ಕೇಂದ್ರ ಉದ್ಘಾಟನೆ ಸಮಾರಂಭದ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ನಾವು ಯಾರ ಜೊತೆಯಾದರೂ ಮಾತನಾಡುವ ವೇಳೆ ನಮಸ್ಕಾರ ಮಾಡಬೇಕು. ಅದು ನಮ್ಮ ಭಾರತೀಯ ಪರಂಪರೆ  ಹಾಗೂ ನಮ್ಮ ಸಂಸ್ಕಾರ ಎಂದರು.
ನಮ್ಮ ಭಾಷೆ ಯಾವುದೇ ಆಗಿರಲಿ ನಾವು ಮೊದಲು ನಮಸ್ಕಾರ ಎಂದು ನಮ್ಮ ಮಾತನ್ನು ಪ್ರಾರಂಭಿಸಬೇಕು. ವಿದ್ಯೆಗೆ ವಿನಯವೇ ಭೂಷಣ ಎಂದು ಅವರು ಹೇಳಿದರು.
ಮಕ್ಕಳು ಭವ್ಯ ಭಾರತದ ಭದ್ರ ಬುನಾದಿಗಳು. ಮಕ್ಕಳು ನಮ್ಮ ಸಂಸ್ಕಾರ ಸಂಸ್ಕೃತಿಯ ಕುಡಿಗಳು ಎಂದು ಅವರು,ಮಕ್ಕಳಲ್ಲಿ ನಾವು ಉತ್ತಮ ಸಂಸ್ಕೃತಿ ಪರಿಪಾಠವನ್ನು ಕಲಿಸಬೇಕಾಗುತ್ತದೆ ಎಂದರು.
ರಾಜ್ಯ ಹಾಗೂ ಪ್ರಾಂತ್ಯಕ್ಕೆ ಅನುಗುಣವಾಗಿ ಭಾಷೆ ಬದಲಾಗಬಹುದು ಆದರೇ ನಮ್ಮ ದೇಶದ ಸಂಸ್ಕೃತಿ ಮಾತ್ರ ನಮಸ್ಕಾರದಿಂದಲೇ ಪ್ರಾರಂಭವಾಗಬೇಕು. ಇದೇ ವೇಳೆ ಮಕ್ಕಳೊಂದಿಗೆ ಉಪ ರಾಷ್ಟ್ರಪತಿಯವರು ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ,ಸಚಿವ ಜಗದೀಶ ಶೆಟ್ಟರ್, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ,ಅರವಿಂದ ಬೆಲ್ಲದ, ಮೋಹನ ಲಿಂಬಿಕಾಯಿ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Leave a Comment