‘ನನ್ನದಲ್ಲದ ಪಾಕಿಸ್ತಾನಕ್ಕೆ ಹೋಗು’ ಎಂದವರಿಗೆ ನನ್ನ ಧಿಕ್ಕಾರ; ಸುಹಾನ ಸಯ್ಯದ್

ಬೆಂಗಳೂರು, ಡಿ ೨೬- ಸರಿಗಮಪ ರಿಯಾಲಿಟಿ ಶೋನಲ್ಲಿ ತಮ್ಮ ಗಾಯನದ ಮೂಲಕ ಮನಗೆದಿದ್ದ ಹಿನ್ನಲೆಗಾಯಕಿ ಸುಹಾನ ಸಯ್ಯದ್ ಇದೀಗ ಪೌರತ್ವದ ಬಗ್ಗೆ ಮಾತನಾಡಿದವರಿಗೆ ಬಿಸಿ ಮುಟ್ಟಿಸಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ರಿಯಾಲಿಟಿ ಶೋನಲ್ಲಿ ನೀನೆ ರಾಮ, ನೀನೆ ಶ್ಯಾಮ, ನೀನೆ ಅಲ್ಲಾ , ನೀನೇ ಏಸು’ ಎಂಬ ಗೀತೆ ಹಾಡಿ ಮುಸ್ಲಿಂ ಸಂಘಟನೆಗಳಿಂದ ವಿರೋಧಕೊಳ್ಳಗಾದ ಸುಹಾನ ವಿರುದ್ಧ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸರ್ಕಾರವು ಜಾರಿಮಾಡಿರುವ ಎನ್‌ಆರ್‌ಸಿ, ಮತ್ತು ಸಿಎಎ ಕುರಿತಾಗಿ ಪರ ಮತ್ತು ವಿರೋಧಗಳು, ಪ್ರತಿಭಟನೆಗಳು ನಡೆಯುತ್ತಿರುವಾಗ ಸುಹಾನಗೆ ಕೆಲವರು ಮಾಡಿರುವ ಕಾಮೆಂಟ್‌ನಿಂದ ಬೇಸತ್ತ ತಮ್ಮ ಸರ್ವಧರ್ಮ ಪ್ರೇಮವನ್ನು ವ್ಯಕ್ತ ಪಡಿಸುತ್ತಾ, ಹೀಗೆ ಬರೆದಿದ್ದಾರೆ.

suhana-syed

ನಾನು ಹುಟ್ಟಿದ್ದು ಬೆಳೆದದ್ದು ಎಲ್ಲ ಹಳ್ಳಿಯಲ್ಲಿ ಇಡೀ ಊರಿಗೆ ಒಂದೇ ಮುಸ್ಲಿಂ ಕುಟುಂಬದ ಮೂರು ಮನೆಗಳು ಅಷ್ಟೇ , ಮಿಕ್ಕವರೆಲ್ಲ ಹಿಂದೂಗಳು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆಯುವಾಗ ಇದ್ದ ಸ್ನೇಹಿತರೆಲ್ಲರೂ ಹಿಂದೂಗಳೇ. ಎಂಬಿಎ ಪದವಿ ಮುಗಿಯುವ ತನಕ ಬೆಸ್ಟ್ ಫ್ರೆಂಡ್ ಅನಿಸಿಕೊಂಡವರು ಎಲ್ಲರೂ ಹಿಂದೂಗಳೇ. ಈಗಲೂ ಸಹ..
ನಮ್ಮ ಮನೆಯಲ್ಲಿ ಎಲ್ಲರೂ ಎಲ್ಲಾ ದೇವಸ್ಥಾನಗಳಿಗೂ ಹೋಗ್ತೀವಿ. ಹಿಂದೂ ಸಹೋದರರ ಎಲ್ಲಾ ಶುಭ ಸಮಾರಂಭಗಳಲ್ಲಿ ಭಾಗವಹಿಸುತ್ತೀವಿ. ಹಾಗೆಯೇ, ನಾಗರಪಂಚಮಿ ದೀಪಾವಳಿ ಊರ ಜಾತ್ರೆ ಬಂದಾಗ ದೇವರಿಗೆ ನಮ್ಮ ಮನೆಯಿಂದ ಹಣ್ಣುಕಾಯಿ ತಪ್ಪದೇ ಒಪ್ಪಿಸುತ್ತೇವೆ.. ನನ್ನ ಅಜ್ಜಿ ವರದಹಳ್ಳಿಯ ಶ್ರೀಧರ ಸ್ವಾಮಿಗಳನ್ನು ತುಂಬಾ ನಂಬುತ್ತಾ ಇದ್ರಂತೆ ನನಗೂ ಕೂಡ ಮನಸ್ಸಿಗೆ ತುಂಬಾ ಬೇಸರವಾದಾಗ ಅಪ್ಪನ ಹತ್ತಿರ ವರದಹಳ್ಳಿಗೆ ಮತ್ತೆ ದರ್ಗಾಕ್ಕೆ ಹೋಗಿ ಬರೋಣ ಅಪ್ಪಾ!! ಅಂತ ಅಂದರೆ ಸಾಕು,. ಅಮ್ಮ, ನಾನು ಬರ್ತೀನಿ ನಡಿ ಅಂತಾರೆ. ನಾನು ನಮಾಜ್ ಮಾಡ್ತೀನಿ ರಂಜಾನ್ ಉಪವಾಸ ಮಾಡ್ತೀನಿ ತೀರ್ಥಪ್ರಸಾದ ನಾನು ತಗೊಳ್ತೀನಿ ಕುಂಕುಮ ಹಚ್ಚಿಕೊಳ್ಳುತ್ತೀನಿ, ಕ್ರಿಸ್ಮಸ್ ಹಬ್ಬಕ್ಕೆ ಅಪ್ಪ-ಅಮ್ಮ ನಾನು ತಮ್ಮ ಪ್ರತಿವರ್ಷ ತಪ್ಪದೆ ಚರ್ಚಿಗೆ ಹೋಗಿ ಕ್ಯಾಂಡಲ್ ಹಚ್ಚಿ ಪ್ರಾರ್ಥನೆ ಮಾಡುತ್ತೇವೆ.
ನನ್ನ ತಂದೆ ತಾಯಿ ಇಬ್ಬರೂ ಪ್ರಾಥಮಿಕ ಶಾಲಾ ಶಿಕ್ಷಕರು ಜಾತಿ,ಧರ್ಮ ನೋಡದೆ ಮಕ್ಕಳಿಗೆ ಭಗವದ್ಗೀತೆಯ ಶ್ಲೋಕಗಳನ್ನು ಹೇಳಿ ಕೊಡ್ತಾರೆ, ರಾಮಾಯಣ, ಮಹಾಭಾರತದ ಕಥೆಗಳನ್ನ ಹೇಳ್ತಾರೆ. ನಾನೂ ಕೂಡಾ ಭಗವದ್ಗೀತೆಯನ್ನು ಓದಿದೀನಿ. ಬೆಳಗ್ಗೆ ಎದ್ದಾಗ ಕರಾಗ್ರೇ ವಸತೇ, ಮಧ್ಯಾಹ್ನ ಅನ್ನಪೂರ್ಣೇ ಸದಾಪೂರ್ಣೇ, ರಾತ್ರಿ ಮಲಗುವಾಗ ರಾಮಂ ಸ್ಕಂದಂ ಹನುಮಂತಂ ಶ್ಲೋಕಗಳನ್ನು ಹೇಳಿದೀನಿ. ನಾನು ಯಕ್ಷಗಾನ ಕಲಾವಿದೆ ಅನ್ನೋದು ಗೊತ್ತಾ? ಎಷ್ಟು ಬಾರಿ ಸಂಗೀತ ಸ್ಪರ್ಧೆಯಲ್ಲಿ ನನ್ನ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದೀನಿ ತಿಳಿದಿದೆಯಾ? ಸಂಗೀತದ ಮೇಲೆ ನನಗಿರುವ ಆಸಕ್ತಿ ಹಾಗು ಕನ್ನಡ ಸಾಹಿತ್ಯದ ಮೇಲೆ ನನಗಿರುವ ಪ್ರೀತಿ,ಗೌರವ ಗೊತ್ತಾ???
ನನ್ನದಲ್ಲದ ಪಾಕಿಸ್ತಾನಕ್ಕೆ ಹೋಗು ಎಂದು ಕಾಮೆಂಟ್ ಮಾಡಿದವರ ಮೇಲೆ ಧಿಕ್ಕಾರ, ಪ್ರಚಾರಕ್ಕೆ ಈ ಮಾತನ್ನು ಆಡುತ್ತಿರುವೆ ಅನ್ನೋ ನಿಮ್ಮ ಈ ಸಂಕುಚಿತ ಮನೋಭಾವದ ಮೇಲೆ ಅತಿಯಾದ ಕನಿಕರ ಇದೆ.. ಇನ್ನು ದಾಖಲೆಗಳ ವಿಚಾರ ಬಂದರೆ ನನ್ನ ಬಳಿ ಹಾಗೂ ನನ್ನ ಕುಟುಂಬದವರ ಬಳಿ ಎಲ್ಲಾ ದಾಖಲೆಗಳು ಇವೆ ಆದರೆ ನಾನು ಪ್ರಶ್ನಿಸಿದ್ದು ನೀವು ಹೇಳಿರುವ ಐಡಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಪಾಸ್ಪೋರ್ಟ್ ಯಾವುದೇ ಆಧಾರಗಳಿಲ್ಲದೆ ಹೊಟ್ಟೆಗೆ ತಿನ್ನಲು ಅನ್ನ ಇಲ್ಲದೆ ಹಾಗೂ ಯಾವುದೇ ಸೌಕರ್ಯಗಳನ್ನು ನಂಬಿ ಬದುಕದ, ಭಾರತದ ಮೂಲ ನಿವಾಸಿಗಳಾದ ಕೆಲವು, ಬುಡಕಟ್ಟು ಹಾಗೂ ಅಲೆಮಾರಿ ಜನಗಳ ಪರವಾಗಿ (ಎಲ್ಲಾ ಧರ್ಮಗಳನ್ನು ಒಳಗೊಂಡು) .. ನೀವು ಹೇಳಿದಂತೆ ನಿಜವಾಗಿಯೂ ಇವರಾರಿಗೂ ತೊಂದರೆ ಇಲ್ಲ ಎಂತಾದರೆ ನನಗೂ ನಿಮಗೂ ಹಾಗೂ ಎಲ್ಲರಿಗೂ ಸಂತೋಷದ ವಿಚಾರ.. ಎಂದು ಸುಹಾನ ಬರೆದುಕೊಂಡು ಕಿಡಿಗೇಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಜಾಲತಾಣದಲ್ಲಿ ಸುಹಾನಳ ಈ ಮಾತಿಗೆ ಅನೇಕು ಬೆಂಬಲ ವ್ಯಕ್ತಪಡಿಸಿ ಧೈರ್ಯ ಹೇಳಿದ್ದಾರೆ.

Leave a Comment