ನನಗೂ ಐ.ಟಿ. ನೋಟೀಸ್ : ಸಿದ್ದು

ಮೈಸೂರು, ಏ. ೧೫- ಆದಾಯ ತೆರಿಗೆ ಇಲಾಖೆ ದಾಳಿಗೆ ಸಂಬಂಧಿಸಿದಂತೆ, ಬೆಂಗಳೂರಿನ ಐ.ಟಿ ಕಛೇರಿ ಮುಂಭಾಗ ಪ್ರತಿಭಟನೆಗೆ ಸಂಬಂಧಿಸಿದಂತೆ ಐ.ಟಿ ಇಲಾಖೆಯಿಂದ ನನಗೂ ಸಹ ನೋಟೀಸು ಜಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಹಿನ್ನಲೆಯಲ್ಲಿ ನನಗೆ 15 ದಿನಗಳ ಕಾಲ ಕಾಲಾವಕಾಶ ನೀಡುವಂತೆ ಐ.ಟಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇನೆ ಎಂದರು.

ಮೈಸೂರಿನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಐ.ಟಿ. ಇಲಾಖೆ ನಿರಂತರವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸುತ್ತಿದೆ. ಇದನ್ನು ಪ್ರತಿಭಟಿಸುವ ಸಲುವಾಗಿ ಬೆಂಗಳೂರಿನ ಐ.ಟಿ. ಕಛೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇದರ ಪರಿಣಾಮವಾಗಿ ನನಗೂ ಸಹ ವಿಚಾರಣೆಗೆ ಹಾಜರಾಗುವಂತೆ ಐ.ಟಿ ಇಲಾಖೆಯಿಂದ ನೋಟೀಸು ಬಂದಿದೆ ಎಂದರು.

ತಾವು ಮತ್ತೊಮ್ಮೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸಿದ್ದೇನೆ. ಈ ಬಗ್ಗೆ ನಾನು ನಿನ್ನೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆಯೇ ವಿನಹ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವೆ. ವಿಧಾನಸಭಾ ಚುನಾವಣೆಗೆ ಇನ್ನೂ 4 ವರ್ಷ ಬಾಕಿ ಇದೆ, ಹಾಗಾಗಿ ಕಾಯ್ದು ನೋಡೋಣ ಎಂದು ಹಾಸ್ಯ ಭರಿತವಾಗಿ ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಸೋತರೆ ರಾಜ್ಯ ಸರ್ಕಾರ ಉಳಿಯುವುದಿಲ್ಲ ಎಂದು ನಿನ್ನೆ ಚುನಾವಣಾ ಪ್ರಚಾರ ಸಮಯದಲ್ಲಿ ತಿಳಿಸಿದ್ದ ಸಿದ್ದರಾಮಯ್ಯ, ನಾನು ನಿನ್ನೆ ಹೇಳಿದ್ದು ಮೈತ್ರಿ ಸರ್ಕಾರ ಸೋತರೆ ರಾಜ್ಯ ಸರ್ಕಾರವನ್ನು ಬಿ.ಜೆ.ಪಿ. ಪಕ್ಷದವರು ಅಸ್ಧಿರಗೊಳಿಸಬಹುದೆಂದು ಯೂಟರ್ನ್ ಹೊಡೆದರು.

ಬಿ.ಜೆ.ಪಿ. ಸದಾ ಮೈತ್ರಿ ಪಕ್ಷವನ್ನು ಅಸ್ಧಿರಗೊಳಿಸುವ ಬಗ್ಗೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಬಿ.ಎಸ್. ಯಡಿಯೂರಪ್ಪ ಹೇಳಿಕೊಂಡು ಬರುತ್ತಿದ್ದರೂ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಅವರಿಂದ ಸಾಧ್ಯವಾಗಿಲ್ಲ. ಅವರೊಬ್ಬ ನಾಯಕನೇ? ಬಿ.ಜೆ.ಪಿ. ಒಂದು ಪಕ್ಷವೇ? ಅವರಿಬ್ಬರಿಗೂ ತತ್ವ ಸಿದ್ಧಾಂತಗಳೇ ತಿಳಿದಿಲ್ಲ. ಹಾಗಾಗಿ ಅವರಿಗೆ ನೈತಿಕತೆ ಎಂಬುದು ಇಲ್ಲವೇ ಎಂದು ಬಿ.ಜೆ.ಪಿ. ಹೇಳಿಕೆ ಬಗ್ಗೆ ಕೆಂಡಾಮಂಡಲವಾದರು.

ಪ್ರಧಾನಿ ಮೋದಿಯವರು ನಮ್ಮ ಸರ್ಕಾರವನ್ನು ಪರ್ಸೆಂಟೇಜ್ ಸರ್ಕಾರ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಅವರು ದೇಶದ ಪ್ರಧಾನಿಯಾಗಿ ಇಂತಹ ಬಾಲಿಶ ಹೇಳಿಕೆಗಳನ್ನು ನೀಡಬಾರದು. ಇದಕ್ಕೆ ಪ್ರತಿಯಾಗಿ ನಾನು ಮೋದಿ ಸರ್ಕಾರ ಶೇ 100 ರಷ್ಟು ಭ್ರಷ್ಟ ಸರ್ಕಾರ ಎಂದು ಆರೋಪ ಮಾಡುತ್ತೇನೆ. ಅದನ್ನು ನೀವು ನಿಮ್ಮ ಮಾಧ್ಯಮಗಳಲ್ಲಿ ಸುದ್ದಿ ರೂಪದಲ್ಲಿ ಪ್ರಚಾರ ಮಾಡುವಿರಾ? ಎಂದು ಮಾಧ್ಯಮದವರಿಗೆ ಸವಾಲು ಹಾಕಿದರು.

ಮೋದಿ ಸರ್ಕಾರವು ಕಳೆದ 5 ವರ್ಷಗಳಲ್ಲಿ ಎಮೋಷನಲ್  ವಿಷಯಗಳನ್ನು ಬಿಟ್ಟು ಬೇರೆ ಏನನ್ನೂ ಮಾಡಿಲ್ಲ. ರಾಹುಲ್ ಗಾಂಧಿಯವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದನ್ನು ಅವರು ಕಮೆಂಟ್ ಮಾಡುತ್ತಾರೆ. ಅಲ್ಲಿ ಮೈನಾರಿಟಿ ಇರುವುದರಿಂದ ಅವರು ಸ್ಪರ್ಧಿಸುತ್ತಾರೆ, ಇದು ಕಮ್ಯುನಲ್ ವಯಲೆನ್ಸ್ ಆಗಿಲ್ಲವೆ? ಈ ರೀತಿ ಪ್ರಧಾನಿ ಹೇಳಿಕೆ ನೀಡಬಹುದೆ? ಎಂದು ಪ್ರಶ್ನಿಸಿದರು

ಈ ಬಾರಿಯ ಲೋಕಸಭಾ ಚುನಾವಣೆಯ ಮತದಾರರ ಮೂಡ್ ಹೇಗಿದೆ? ಎಂದು ಕೇಳಿದ ಪ್ರಶ್ನೆಗೆ ಮೂಡ್ ಎಂದರೆ ಏನು? ಮೂಡ್ ಅಂದ್ರೆ ಬೇರೆ ಕಣಪ್ಪಾ, ಮೂಡ್ ಬರುವುದು ಬೇರೆ ಬೇರೆ ಕೆಲಸಗಳಿಗೆ. ಈಗ ಮತದಾರರ ಅಭಿಪ್ರಾಯ ಅವರಿಗೆ ಬಿಟ್ಟಿದ್ದು ಎಂದು ಉತ್ತರಿಸಿದರು. ಇಲ್ಲಿನ ಜನತೆ ಮೈತ್ರಿ ಸರ್ಕಾರದ ಪರವಾಗಿ ಕೆಲಸ ಮಾಡಲು ನಿರ್ಧರಿಸಿದ್ದಾರೆ, ನೀವು ಈ ರೀತಿಯ ಪ್ರಶ್ನೆಯನ್ನು ಯಾವ ಮೂಡ್‌ನಲ್ಲಿ ನನಗೆ ಕೇಳುತ್ತಿರುವಿರಿ? ಎಂದು ಪರ್ತಕರ್ತರಿಗೆ ಮರು ಪ್ರಶ್ನೆ ಹಾಕಿದರು.

Leave a Comment