ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆ

ಉಡುಪಿ, ಅ.೧೫- ಕಲ್ಯಾಣಪುರ ಸೇತುವೆಯಲ್ಲಿ ಅ.೧೩ರಂದು ರಾತ್ರಿ ವೇಳೆ ಸ್ಕೂಟರ್ ನಿಲ್ಲಿಸಿ ನದಿಗೆ ಹಾರಿದ್ದನೆನ್ನಲಾದ ಯುವಕನ ಮೃತದೇಹ ನಿನ್ನೆ ಸಂಜೆ ನದಿ ನೀರಿನಲ್ಲಿ ಪತ್ತೆಯಾಗಿದೆ. ಮೃತರನ್ನು ಬನ್ನಂಜೆಯ ದೀಕ್ಷಿತ್ ಶೆಟ್ಟಿ(೨೬) ಎಂದು ಗುರುತಿಸಲಾಗಿದೆ. ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು ರಾತ್ರಿ ೧೦:೩೦ರ ಸುಮಾರಿಗೆ ತನ್ನ ಸ್ಕೂಟರ್‌ನಲ್ಲಿ ಸೇತುವೆ ಬಳಿ ಬಂದಿದ್ದು, ಅಲ್ಲಿ ಸ್ಕೂಟರ್ ನಿಲ್ಲಿಸಿ ಮತ್ತು ಅದರಲ್ಲಿ ತನ್ನ ಮೊಬೈಲ್ ಇಟ್ಟು ಮೇಲಿನಿಂದ ನದಿಗೆ ಹಾರಿದ್ದರು. ನಿನ್ನೆ ಬೆಳಗ್ಗೆ ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯರು ನದಿಯಲ್ಲಿ ಹುಡುಕಾಟ ನಡೆಸಿದ್ದರು. ಸಂಜೆ ಮೃತದೇಹವು ಸೇತುವೆಯ ಅಡಿಭಾಗದಲ್ಲಿ ಪತ್ತೆಯಾಗಿದೆ. ಮೃತರ ಸಾವಿಗೆ ಕಾರಣ ತಿಳಿದುಬಂದಿಲ್ಲ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment