ನಡು ರಸ್ತೆಯಲ್ಲಿಯೇ ಬೈಕ್ – ಕಣ್ಮುಚ್ಚಿದ ಪೊಲೀಸ್

ನಿರ್ವಹಣೆ ವೈಫಲ್ಯ : ನಗರ ಸಂಚಾರ ಅಸ್ತವ್ಯಸ್ತ
ರಾಯಚೂರು.ಫೆ.16- ಸಂಚಾರ ನಿಯಮ ಉಲ್ಲಂಘನೆ ನಗರದ ವಾಹನ ಚಾಲಕರಿಗೆ ಸಾಮಾನ್ಯ ಸಂಗತಿಯಾಗಿದೆ. ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನ ಚಾಲಕರು ಬಹುತೇಕವಾಗಿ ಸಂಚಾರ ನಿಯಮ ಪಾಲಿಸದಿರುವುದು ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ.
ಇಂತಹದೊಂದು ಘಟನೆ ನಗರದ ಅತ್ಯಂತ ಜನನಿಬಿಡ ಪ್ರದೇಶವೆಂದೇ ಗುರುತಿಸಿಕೊಂಡ ಸ್ಟೇಷನ್ ರಸ್ತೆಯಲ್ಲಿ ಕಂಡು ಬಂದಿತು. ದ್ವಿಚಕ್ರ ವಾಹನವೊಂದು ರಸ್ತೆಯ ಮಧ್ಯೆದಲ್ಲಿ ರಾಜಾರೋಷವಾಗಿ ನಿಲ್ಲಿಸಲಾಗಿತ್ತು. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗಿದ್ದರೂ, ಇತ್ತ ನಾಗರೀಕರೂ ಅತ್ತ ಸಂಚಾರಿ ಪೊಲೀಸರು ಯಾರು ಸಹ ಈ ದ್ವಿಚಕ್ರ ವಾಹನ ಬದಿಗೆ ಸರಿಸುವ ಪ್ರಯತ್ನ ನಡೆಸಲಿಲ್ಲ.
ಈ ವಾಹನವೂ ಸುಮಾರು ಒಂದು ಗಂಟೆ ಕಾಲ ರಸ್ತೆಗೆ ಅಡ್ಡಲಾಗಿ ನಿಂತಿತ್ತು. ರಸ್ತೆ ಬದಿಯಲ್ಲಿ ವಾಹನ ಬೇಕಾಬಿಟ್ಟಿ ನಿಲ್ಲಿಸುವುದು ಹವ್ಯಾಸವಾಗಿದೆ. ಒಂದೆಡೆ ಸಾರ್ವಜನಿಕರು ರಸ್ತೆ ಮೇಲೆ ವಾಹನ ನಿಲ್ಲಿಸಿದರೇ, ಮತ್ತೊಂದೆಡೆ ಆಸ್ಪತ್ರೆ ಮತ್ತು ಇತರೆ ವಾಣಿಜ್ಯ ಕೇಂದ್ರಗಳಲ್ಲಿ ವಾಹನ ಪಾರ್ಕಿಂಗ್ ಪರ್ಯಾಯ ವ್ಯವಸ್ಥೆ ಇಲ್ಲದಿರುವುದರಿಂದ ಜನ ರಸ್ತೆಯಲ್ಲಿ ವಾಹನ ನಿಲ್ಲಿಸುವುದು ಸಾಮಾನ್ಯವಾಗಿದೆ.
ಇದರಿಂದ ನಗರದಲ್ಲಿ ಸಂಚಾರ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದೆ. ಸಂಚಾರಿ ಪೊಲೀಸರು ರಸ್ತೆಯಲ್ಲಿ ಓಡಾಡುತ್ತಿದ್ದರೂ, ಈ ಬಗ್ಗೆ ಗಮನ ಹರಿಸದಿರುವುದರಿಂದ ಸಾರ್ವಜನಿಕರಿಗೆ ಸಂಚಾರಿ ಪೊಲೀಸ್ ವ್ಯವಸ್ಥೆ ಇದೆಯೇ? ಇಲ್ಲವೇ? ಎನ್ನುವ ಅನುಮಾನ ಮೂಡುವಂತಹ ಪರಿಸ್ಥಿತಿ ತಂದೊಡ್ಡಿದೆ. ಕೆಲವು ದಿನಗಳ ಹಿಂದೆ ಸ್ವತಃ ಎಸ್ಪಿ ಅವರು, ಫುಟ್ಪಾತ್ ಅತಿಕ್ರಮಣ ತೆರವುಗೊಳಿಸಿದರು. ಮತ್ತೊಂದು ಕಡೆ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ ವಾಹನಗಳನ್ನು ಜಪ್ತಿ ಮಾಡುವ ಮೂಲಕ ಸಂಚಾರ ವ್ಯವಸ್ಥೆಯನ್ನು ಸುಗುಮಗೊಳಿಸುವ ಪ್ರಯತ್ನ ನಡೆದವಾದರೂ, ಇವೆಲ್ಲವೂ ಈಗ ತಾತ್ಕಾಲಿಕ ಎನ್ನುವಂತಾಗಿದೆ.
ಸಂಚಾರಿ ಠಾಣಾ ಪೊಲೀಸರು ತಮಗೆ ವಹಿಸಿದ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸದ ಕಾರಣ ಸಂಚಾರ ಪರಿಸ್ಥಿತಿ ಗಂಭೀರವಾಗಿದೆ. ಪಟೇಲ್ ರಸ್ತೆಯಲ್ಲಿ ಹಾಡುಹಗಲೇ ವಾಹನಗಳನ್ನು ಲಾರಿಗಳು ಅನ್ಲೋಡಿಂಗ್ ಮಾಡಿರುವುದು ಇನ್ನೂವರೆಗೂ ಮುಂದುವರೆದಿದೆ. ಪಟೇಲ್ ಇಲ್ಲಿಂದ ಸ್ಥಳಾಂತರಗೊಂಡರೂ ಸಂಚಾರ ದಟ್ಟತೆ ಸಮಸ್ಯೆ ಮಾತ್ರ ಇನ್ನೂವರೆಗೂ ಇಲ್ಲಿಂದ ಸ್ಥಳಾಂತರಗೊಂಡಿಲ್ಲ.
ನಗರದಲ್ಲಿ ನಿರ್ಮಾಣಗೊಂಡ ರಸ್ತೆಗಳಿಗೆ ಎಲ್ಲಿಯೂ ಸಹ ಸಮರ್ಪಕ ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ರಸ್ತೆಯ ಮೇಲೆಯೇ ವಾಹನ ನಿಲ್ಲಿಸುವಂತಹ ಪರಿಸ್ಥಿತಿಯಿದೆ. ಮತ್ತೊಂದೆಡೆ ವ್ಯಾಪಾರಸ್ಥರು ಫುಟ್ಪಾತ್ ಅತಿಕ್ರಮಿಸಿರುವುದು ಸಾರ್ವಜನಿಕರು ರಸ್ತೆಗಳಲ್ಲಿ ಓಡಾಡುವುದರಿಂದ ಸಂಚಾರ ದಟ್ಟತೆ ಮಿತಿ ಮೀರುವಂತಾಗಿದೆ. ಹೆಚ್ಚುತ್ತಿರುವ ವಾಹನಗಳಿಂದಾಗಿ ನಗರ ಸಂಚಾರ ವ್ಯವಸ್ಥೆ ಹತೋಟಿ ಮೀತಿ ಮೀರಿ ಅಪಘಾತಗಳಿಗೆ ಆಹ್ವಾನ ನೀಡಿದಂತಿದೆ.
ನಗರ ಸಂಚಾರ ಠಾಣೆ ಈ ಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೇ, ಸಂಚಾರ ವ್ಯವಸ್ಥೆ ಮತ್ತಷ್ಟು ಹದಗೆಡುವುದು ನಿಶ್ಚಿತವಾಗಿದೆ. ಪ್ರತಿನಿತ್ಯ ಸ್ಟೇಷನ್ ರಸ್ತೆಯಲ್ಲಿ ವಾಹನ ತಪಾಸಣೆ ಮಾಡಿ, ದಂಡ ವಿಧಿಸುವುದೇ ಸಂಚಾರಿ ಪೊಲೀಸರ ಕರ್ತವ್ಯ ಎನ್ನುವಂತಾಗಿದೆ. ಪೊಲೀಸರ ಈ ದಂಡ ವಿಧಿಸುವಿಕೆಯಿಂದ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರ ನಿರ್ಬಂಧಿಸುವಂತಾಗಿ ಪರ್ಯಾಯ ರಸ್ತೆಗಳಲ್ಲಿ ಸಂಚಾರ ದಟ್ಟತೆ ಮತ್ತಷ್ಟು ತೀವ್ರಗೊಳ್ಳುವಂತಾಗಿದೆ.
ನಗರ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇನ್ನಿತರ ಮೇಲಾಧಿಕಾರಿಗಳು ಗಮನ ಹರಿಸಿ, ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗದಿದ್ದರೇ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಗಳಿದ್ದು, ಇನ್ನಾದರೂ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸುವುದೇ?.

Leave a Comment