ನಟ ಸಲ್ಮಾನ್‌ಖಾನ್‌ಗೆ ಮತ್ತೆ ಸಂಕಷ್ಟ

ಮುಂಬೈ, ಜು ೮- ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಿಲುಕಿ ಪರದಾಡಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು. ಮುಂಬೈನ ಪಾನ್ವಾಲಾದಲ್ಲಿರೋ ಬಾಲಿವುಡ್ ನಟರ ಫಾರ್ಮ್ ಹೌಸ್‌ನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆಂದು ಆರೋಪಿಸಿ ಸಲ್ಮಾನ್ ಖಾನ್ ಸೇರಿ ಅವರ ಕುಟುಂಬದ ೫ ಮಂದಿಯ ವಿರುದ್ಧ ನೋಟಿಸ್ ಜಾರಿಯಾಗಿದೆ.

ಮಹಾರಾಷ್ಟ್ರದ ಅರಣ್ಯ ಇಲಾಖೆ ಜೂನ್ ೯ರಂದು ಈ ನೋಟಿಸ್ ಜಾರಿ ಮಾಡಿದೆ. ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರು ರಾಯ್ ಗಡ್ ಜಿಲ್ಲೆಯ ಪಕ್ಕದ ಪಾನ್ವಾಲಾದಲ್ಲಿ ಆಸ್ತಿ ಹೊಂದಿದ್ದು, ಈತ ಬಾಲಿವುಡ್ ನಟ ತಂದೆ ಸಲೀಂ ಖಾನ್ ವಿರುದ್ಧ ದೂರು ನೀಡಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನೋಟಿಸ್ ಪ್ರಕಾರ, ಸಲ್ಮಾನ್ ಖಾನ್ ಅವರಿಗೆ ಪ್ರತಿಕ್ರಿಯಿಸಲು ೭ ದಿನಗಳ ಕಾಲಾವಕಾಶ ನೀಡಲಾಗಿದೆ. ಏಳು ದಿನಗಳ ಬಳಿಕ ಖಾನ್ ಕುಟುಂಬದ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರದ ಅರಣ್ಯ ಸಚಿವ ಸುಧೀರ್ ಮುಂಗಂತಿವಾರ್ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಸಲ್ಮಾನ್ ತಂದೆ ಸಲೀಂ ಖಾನ್ ಅವರನ್ನು ಕೇಳಿದಾಗ, ಕಟ್ಟಡ ನಿರ್ಮಾಣದ ಕೆಲಸ ಮಾಡುವ ಮೊದಲು ಕಾನೂನು ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ಎಲ್ಲಾ ವಿನ್ಯಾಸಗಳನ್ನು ಕ್ರಮಬದ್ಧಗೊಳಿಸಲಾಗಿದ್ದು, ಅಗತ್ಯವಿರುವ ಶುಲ್ಕಗಳನ್ನು ಕೂಡ ಪಾವತಿಸಲಾಗಿದೆ. ಹೀಗಾಗಿ ಇದು ಅಕ್ರಮ ನಿರ್ಮಾಣ ಅಲ್ಲ ಎಂಬುದಾಗಿ ತಿಳಿಸಿದ್ದಾರೆ.

ಈ ಫಾರ್ಮ್ ಹೌಸ್ ಸಲ್ಮಾನ್ ಖಾನ್, ಅಲ್ವಿರಾ ಖಾನ್, ಅರ್ಬಾಜ್ ಖಾನ್, ಅರ್ಪಿತಾ ಖಾನ್, ಹೆಲೆನ್ ಖಾನ್ ಹಾಗೂ ಸೊಹೈಲ್ ಖಾನ್ ಅವರಿಗೆ ಸೇರಿದ್ದಾಗಿರುವುದಾಗಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ನಿಮ್ಮ ಕುಟುಂಬ ಇದರಲ್ಲಿ ಭಾಗಿಯಾಗಿರುವುದನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ ಹಾಗೂ ಯಾಕೆ ಸ್ಪಷ್ಟೀಕರಣ ನೀಡುತ್ತಿಲ್ಲ ಎಂಬುದಾಗಿ ಪ್ರಶ್ನಿಸಲಾಗಿದೆ. ಒಂದು ವೇಳೆ ನೀವು ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ವಿವರಣೆ ನೀಡದಿದ್ದಲ್ಲಿ ಇಡೀ ಕುಟುಂಬದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಕೆಯನ್ನು ಕೂಡ ನೋಟಿಸ್ ನಲ್ಲಿ ನೀಡಲಾಗಿದೆ.

Leave a Comment