ನಟ ಯಶ್‌ಗೆ ಸೈಮಾ ಪ್ರಶಸ್ತಿ

ಬೆಂಗಳೂರು, ಆ೧೬- ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಕೆಜಿಎಫ್ ಚಿತ್ರದ ಅಭಿನಯಕ್ಕಾಗಿ ನಟ ರಾಕಿಂಗ್ ಸ್ಟಾರ್ ಯಶ್‌ಗೆ ಪ್ರಸಕ್ತ ಸಾಲಿನ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಲಭಿಸಿದೆ.

ಕತಾರ್‌ನಲ್ಲಿ ನಡೆದ ೮ ನೇ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಈ ಪ್ರಶಸ್ತಿಗೆ ನಟ ಯಶ್ ಭಾಜನರಾಗಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಿಯಾಳಂನಲ್ಲೂ ತೆರೆಕಂಡು ಭರ್ಜರಿ ಯಶಸ್ಸು ಕಂಡಿದ್ದ ಕೆಜಿಎಫ್ ಬಾಕ್ಸ್ ಆಪೀಸ್‌ನಲ್ಲೂ ಕೊಳ್ಳೆಹೊಡೆದಿತ್ತು, ಅಲ್ಲದೇ ಅಮೆಜಾನ್‌ನಲ್ಲೂ ಉತ್ತಮ ಮೊತ್ತಕ್ಕೆ ಮಾರಾಟಗೊಂಡ ಚಿತ್ರವಾಗಿತ್ತು.

ಇನ್ನು ಇತ್ತೀಚೆಗೆ ಕೆಜಿಎಫ್‌ನ ಅನೇಕ ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಕೆಜಿಎಫ್ ಚಿತ್ರದ ರಾಕಿಭಾಯ್ ಪಾತ್ರಕ್ಕೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಯಶ್‌ಗೆ ನೀಡಲಾಗಿದೆ. ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿಗೆ ಟಗರು ಸಿನಿಮಾದಿಂದ ಶಿವಣ್ಣ, ರ್‍ಯಾಂಬೋ ೨ ಚಿತ್ರದಿಂದ ಶರಣ್, ಅಯೋಗ್ಯ ಚಿತ್ರದಿಂದ ನಿನಾಸಂ ಸತೀಶ್ ಮತ್ತು ಸರ್ಕಾರಿ ಹಿರಿಯ ಪ್ರಾರ್ಥಮಿಕ ಪಾಠಶಾಲೆ ಚಿತ್ರದಿಂದ ಅನಂತ್ ನಾಗ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಹಿಂದೆ ’ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಸಿನಿಮಾಗೆ ಮೊದಲ ಬಾರಿಗೆ ಯಶ್ ಸೈಮಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ ಪ್ರಧಾನ ಕಾರ್ಯಕ್ರಮದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟ ನಟಿಯರು ಪಾಲ್ಗೊಂಡಿದ್ದರು.

ಸೈಮಾ ಪ್ರಶಸ್ತಿ ಗೆದ್ದ ಪಟ್ಟಿ
ಅತ್ಯುತ್ತಮ ನಟ ಯಶ್ (ಕೆಜಿಎಫ್)
ಅತ್ಯುತ್ತಮ ನಿರ್ದೇಶಕ ಪ್ರಶಾಂತ್ ನೀಲ್ (ಕೆಜಿಎಫ್)
ಅತ್ಯುತ್ತಮ ಖಳ ನಟ ಧನಂಜಯ್ (ಟಗರು)
ಅತ್ಯುತ್ತಮ ನವ ನಟಿ ಅನುಪಮ ಗೌಡ (ಆ ಕರಾಳ ರಾತ್ರಿ)
ಅತ್ಯುತ್ತಮ ನವ ನಿರ್ದೇಶಕ ಮಹೇಶ್ ಕುಮಾರ್ (ಅಯೋಗ್ಯ)
ಅತ್ಯುತ್ತಮ ಗೀತರಚನೆ ಚೇತನ್ ಕುಮಾರ್ (ಏನಮ್ಮಿ ಏನಮ್ಮಿ)
ಅತ್ಯುತ್ತಮ ಪೋಷಕ ನಟ ಪ್ರಕಾಶ್ ಕೆ ತುಮಿನಾಡು (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು)
ಅತ್ಯುತ್ತಮ ಪೋಷಕ ನಟಿ ಅರ್ಚನಾ (ಕೆಜಿಎಫ್)
ಅತ್ಯುತ್ತಮ ಗಾಯಕಿ ಅನನ್ಯ ಭಟ್ (ಹೋಲ್ಡನ್..ಹೋಲ್ಡನ್..)
ಅತ್ಯುತ್ತಮ ಛಾಯಾಗ್ರಾಹಕ ಭುವನ್ ಗೌಡ (ಕೆಜಿಎಫ್)

Leave a Comment