ನಟಿ ರಿತುಪರ್ಣ ಸೇನ್ ಗುಪ್ತಾಗೆ ‘ಇಡಿ’ ಸಮನ್ಸ್

ಕೋಲ್ಕತಾ, ಜುಲೈ 10: ರೋಸ್ ವ್ಯಾಲಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಜನಪ್ರಿಯ ಬೆಂಗಾಲಿ ನಟಿ ರಿತುಪರ್ಣ ಸೇನ್ ಗುಪ್ತಾ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಮಂಗಳವಾರದಂದು ನಟ ಪ್ರೊಸೆನ್ ಜಿತ್ ಚಟರ್ಜಿ ಅವರಿಗೆ ಸಮನ್ಸ್ ಕಳಿಸಿ, ಜುಲೈ 19ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಸೂಚಿಸಿತ್ತು. ಈಗ ರಿತುಪರ್ಣ ಅವರಿಗೆ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.

ಶಾರದಾ ಚಿಟ್ ಫಂಡ್ ಸೇರಿದಂತೆ ಹಲವು ಮನಿ ಡಬ್ಲಿಂಗ್ ಹಗರಣಗಳ ತನಿಖೆ ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯವು ಈಗ ಸೆಲೆಬ್ರಿಟಿಗಳ ವಿಚಾರಣೆ ಶುರು ಮಾಡಿದೆ. ಮನಿಲಾಂಡ್ರಿಂಗ್ ನಿಯಂತ್ರಣ ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸಲಾಗಿದೆ.

ಚಟರ್ಜಿ ಅವರ ಕಂಪನಿ ಐಡಿಯಾ ಲೊಕೇಷನ್ ಅಂಡ್ ಪ್ರೊಡಕ್ಷನ್ ಪ್ರೈ ಲಿಮಿಟೆಡ್ ಗೆ ರೋಸ್ ವ್ಯಾಲಿ ಸಮೂಹದಿಂದ 2.75 ಕೋಟಿ ರು ಜಮೆಯಾಗಿದ್ದರ ಬಗ್ಗೆ ಜಾರಿ ನಿರ್ದೇಶನಾಲಯವು ಪ್ರಶ್ನಿಸಲಿದೆ. 2010ರಿಂದ 2011ರ ಅವಧಿಯಲ್ಲಿ ಈ ವ್ಯವಹಾರ ನಡೆದಿದ್ದು ಚಟರ್ಜಿ ಅವರಿಗೆ 23.5 ಲಕ್ಷ ರು ಲಾಭವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ಸಿನ ನಾಯಕ ಮದನ್ ಮಿತ್ರಾ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಲಾಗಿತ್ತು.

Leave a Comment