ನಗರ ಸಂಪೂರ್ಣ ಸ್ತಬ್ಧ – ಹೊರಗೆ ಬಂದರೇ ಲಾಠಿ

ಕೊರೊನಾ 21 ದಿನ ಲಾಕ್ ಡೌನ್ – 2ನೇ ದಿನ ಯಶಸ್ವಿ ನಿಯಂತ್ರಣ
ರಾಯಚೂರು.ಮಾ.26- ಕೊರೊನಾ ವಿರುದ್ಧದ ಸಮರದ 21 ದಿನಗಳ ಲಾಕ್ ಡೌನ್‌ 2ನೇ ದಿನ ಇಂದು ಸಹ ಜನರ ಓಡಾಟ ಸಂಪೂರ್ಣ ನಿರ್ಬಂಧಿಸಲಾಗಿತ್ತು.
ಪೊಲೀಸರು ಎಲ್ಲಾ ರಸ್ತೆಗಳನ್ನು ಲಾಕ್ ಡೌನ್ ಮಾಡಿದ ಪರಿಣಾಮ ಯಾವುದೇ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಓಡಾಡದ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರ ಪ್ರದೇಶಗಳಲಂತೂ ಪ್ರತಿ ಬಡಾವಣೆಯಿಂದ ಜನರು ಹೊರ ಹೋಗದಂತೆ ತಡೆಯಲು ಭಾರೀ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸರು ಲಾಕ್ ಡೌನ್ ಯಶಸ್ವಿಗೊಳಿಸಲು ರಸ್ತೆಗಳ ಮಧ್ಯೆ ಲಾಠಿ ಹಿಡಿದು ನಿಂತಿದ್ದಾರೆ.
ವಾಹನಗಳಲ್ಲಿ ಯಾರಾದರೂ, ಓಡಾಡುವುದು ಕಂಡು ಬಂದರೇ, ಯಾವುದೇ ಮುನ್ನೆಚ್ಚರಿಕೆ ನೀಡದೇ, ಲಾಠಿ ಬೀಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆಯಾಗಿ ಕೊರೊನಾ ವಿರುದ್ಧದ ಈ ಸಂಘರ್ಷ ಮತ್ತಷ್ಟು ತೀವ್ರಗೊಂಡು ನಗರಗಳನ್ನು ಸಂಪೂರ್ಣ ಬಂದ್ ಮಾಡಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿನ್ನೆಗಿಂತ ಮತ್ತಷ್ಟು ತೀವ್ರವಾಗಿತ್ತು.
ಸಾರ್ವಜನಿಕರು ಮನೆಗಳಿಂದ ಹೊರಗೆ ಬಾರದೇ, ಸಂಪೂರ್ಣ ತಮ್ಮನ್ನು ತಾವು ಮನೆಗಳಿಗೆ ಸೀಮಿತ ಮಾಡಿಕೊಂಡಿದ್ದರು. ಕೇವಲ ಬಡಾವಣೆಗಳ ಒಂದಷ್ಟು ಪ್ರದೇಶಗಳಿಗೆ ಮಾತ್ರ ಓಡಾಡುವುದಕ್ಕೆ ಸೀಮಿತಗೊಂಡಿದ್ದರು. ಜಿಲ್ಲಾಡಳಿತ ಸಾರ್ವಜನಿಕರ ಅನುಕೂಲಕ್ಕಾಗಿ ಅಲ್ಲಲ್ಲಿ ತರಕಾರಿ ಮತ್ತಿತರ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ನಗರಸಭೆ ಅಧಿಕಾರಿಗಳನ್ನೇ ನಿಯುಕ್ತಿಗೊಳಿಸಲಾಗಿದೆ.
21 ದಿನಗಳ ಈ ಲಾಕ್ ಡೌನ್ ನಿರ್ವಹಿಸಲು ಜಿಲ್ಲಾಡಳಿತ ಒಂದೆಡೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದರೇ, ಮತ್ತೊಂದೆಡೆ ಜನರು ಹೊರ ಬರಲು ಅಲ್ಲಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಕೊರೊನಾದ ಈ ಲಾಕ್ ಡೌನ್ ಬಡ ಮತ್ತು ಸಣ್ಣಪುಟ್ಟ ವ್ಯಾಪಾರಿಗಳಿಗೆ ಎಲ್ಲಿಲ್ಲದ ತೊಂದೆರೆಗೆ ದಾರಿ ಮಾಡಿದೆ. ದಿನ ನಿತ್ಯದ ಕೂಲಿಯಿಂದ ಜೀವನ ಮಾಡುವವರಿಗಂತೂ ಕೆಲಸವೇ ಇಲ್ಲದೇ, ಮನೆಯಲ್ಲಿ ಕೂರೂವ ದಾರುಣ ಸ್ಥಿತಿಯನ್ನು ತಂದೊಡ್ಡಿದೆ. ರಾಯಚೂರು ಜಿಲ್ಲೆಯ ಆರ್ಥಿಕ ವ್ಯವಹಾರವನ್ನು ಕೊರೊನಾ ಸಂಪೂರ್ಣ ಅಸ್ತವ್ಯಸ್ತಗೊಳಿಸಿ, ಜನ ಜೀವನ ತತ್ತರಗೊಳ್ಳುವಂತೆ ಮಾಡಿದೆ.

Leave a Comment