ನಗರ ರಿಂಗ್ ರಸ್ತೆ : ಭೂ ಸ್ವಾಧೀನಕ್ಕೆ 50 ಕೋಟಿ – ಕನಸು ನನಸಾಗುವುದೇ?

* ಲೋಕೋಪಯೋಗಿ ಇಲಾಖೆ ಪ್ರವಾಸ – ಮಹತ್ವಾಕಾಂಕ್ಷಿ ಜಿಲ್ಲೆಗೆ ವರ ನೀಡುವರೇ?
ರಾಯಚೂರು.ಫೆ.23- ಹೈದ್ರಾಬಾದ್ ಕರ್ನಾಟಕದ ಗುಲ್ಬರ್ಗಾ, ಬಳ್ಳಾರಿ ನಗರಗಳಲ್ಲಿ ರಿಂಗ್ ರಸ್ತೆ ನಿರ್ಮಾಣಗೊಂಡಿದ್ದರೂ, ರಾಯಚೂರು ನಗರದಲ್ಲಿ ಇನ್ನೂವರೆಗೂ ರಿಂಗ್ ರಸ್ತೆ ಕನಸಾಗಿಯೇ ಉಳಿದಿದೆ.
ಹೈದ್ರಾಬಾದ್ ಮುಖ್ಯ ರಸ್ತೆಯಿಂದ ಲಿಂಗಸೂಗೂರು ರಸ್ತೆಯವರೆಗೆ 10 ವರ್ಷಕ್ಕೂ ಹಿಂದೆ ಬೈಪಾಸ್ ನಿರ್ಮಾಣಗೊಂಡ ನಂತರ ಉಳಿದ ಶೇ.75 ರಷ್ಟು ಕಾಮಗಾರಿ ಕೈಗೊಳ್ಳದ ಕಾರಣ ನಗರ ರಿಂಗ್ ರಸ್ತೆ ಅಪೂರ್ಣಗೊಂಡು ನಗರದ ಒಳ ಭಾಗದಲ್ಲಿಯೇ ಅನಗತ್ಯವಾಗಿ ಸಂಚಾರ ಹೆಚ್ಚುವಂತೆ ಮಾಡಿದೆ. ಹೈದ್ರಾಬಾದ್, ಬೆಳಗಾವ, ಹುಬ್ಬಳ್ಳಿ, ಬೆಂಗಳೂರು ಮತ್ತಿತರ ಸಂಚಾರಕ್ಕೆ ಪ್ರಮುಖ ಕೇಂದ್ರವಾದ ನಗರದಲ್ಲಿ ರಿಂಗ್ ರಸ್ತೆ ಇಲ್ಲದ ಕಾರಣ ಭಾರೀ ವಾಹನಗಳು ನಗರದ ಮಧ್ಯ ಭಾಗದಿಂದ ಹಾದು ಹೋಗುವಂತಹ ಅನಿವಾರ್ಯತೆ ನಿರ್ಮಾಣಗೊಂ‌ಡಿದೆ.
ಇದರಿಂದ ನಗರದಲ್ಲಿ ಸಂಚಾರ ದಟ್ಟತೆ ದಿನೇ ದಿನೇ ಹುಚ್ಚುವುದಕ್ಕೆ ಕಾರಣವಾಗಿದೆ. ಭಾರೀ ವಾಹನಗಳಿಂದ ಅಪಘಾತ ಹೆಚ್ಚಳಕ್ಕೂ ದಾರಿ ಮಾಡಿದೆ. ಶ್ರೀ ಬಸವೇಶ್ವರ ವೃತ್ತ, ಸ್ಟೇಷನ್ ರಸ್ತೆ, ಐ.ಬಿ.ರಸ್ತೆ, ಆರ್‌ಟಿಓ ವೃತ್ತಗಳಲ್ಲಿ ಅನೇಕ ಅಪಘಾತಗಳಲ್ಲಿ ಅಮಾಯಕರು ಬಲಿಯಾಗುವಂತಾಗಿದೆ. ಇತ್ತೀಚಿಗೆ ಐಬಿ ರಸ್ತೆಯ ಐಡಿಎಸ್ಎಂಟಿ ಲೇಔಟ್‌ನಲ್ಲಿ ಸಂಚಾರ ನಿಯಮಾನುಸಾರ ಒಂದು ಬದಿಯಲ್ಲಿ ಸಂಚರಿಸುತ್ತಿರುವ ದ್ವಿಚಕ್ರ ವಾಹನ ಮಾಲೀಕರಿಗೆ ಡಿಕ್ಕಿ ಪರಿಣಾಮ ಲಾರಿ ಉರುಳಿ ಬಿದ್ದ ಘಟನೆ ನಗರದಲ್ಲಿ ವಾಹನ ಸಂಚಾರ ದಟ್ಟತೆಯ ಪರಿಸ್ಥಿತಿಗೆ ಸಾಕ್ಷಿಯಾಗಿದೆ.
ಗೋಶಾಲ ರಸ್ತೆ, ಅರಬ್ ಮೊಹಲ್ಲಾ ವೃತ್ತ ಮತ್ತು ಗಂಜ್ ವೃತ್ತದಲ್ಲಿಯೂ ಅನೇಕ ಅಪಘಾತಗಳಾಗಿವೆ. ಬೆಂಗಳೂರು, ಮಹಿಬೂಬ್ ನಗರ, ಬೆಳಗಾವ, ಹುಬ್ಬಳ್ಳಿ, ಹೈದ್ರಾಬಾದ್ ಹಾಗೂ ಮದ್ರಾಸ್ ಹೈದ್ರಾಬಾದ್ ನೇರ ಸಂಪರ್ಕ ಹಿನ್ನೆಲೆಯಲ್ಲಿ ಭಾರೀ ವಾಹನಗಳು ನಗರದಲ್ಲಿಯೇ ಹಾದು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿವೆ. ರಿಂಗ್ ರಸ್ತೆ ನಿರ್ಮಾಣಕ್ಕಾಗಿ ನಿರಂತರ ಒತ್ತಾಯ ಮಾಡುತ್ತಿದ್ದರೂ, ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಈಗ ರಾಜ್ಯ ಸರ್ಕಾರ ರಿಂಗ್ ರಸ್ತೆ ನಿರ್ಮಾಣಕ್ಕಾಗಿ 50 ಕೋಟಿ ಭೂ ಸ್ವಾಧೀನಕ್ಕೆ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದೆ. ಇತ್ತೀಚಿಗೆ ನಡೆದ ಆರ್‌ಡಿಎ ಸಭೆಯಲ್ಲಿ ನಗರದಲ್ಲಿ ರಿಂಗ್ ರಸ್ತೆ ನಿರ್ಮಾಣಕ್ಕಾಗಿ ತೀರ್ಮಾನಿಸಲಾಗಿದೆ. ಇದಕ್ಕಾಗಿ 165 ಎಕರೆ ಜಮೀನು ಅಗತ್ಯವೆಂದು ಗುರುತಿಸಲಾಗಿದೆ. ಈಗಾಗಲೇ ಹೈದ್ರಾಬಾದ್ ರಸ್ತೆಯಿಂದ ಲಿಂಗಸೂಗೂರು ರಸ್ತೆಗೆ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ.
ಇದನ್ನು ಮುಂದುವರೆಸಿ, ಲಿಂಗಸೂಗೂರು ರಸ್ತೆಯಿಂದ ಮಂತ್ರಾಲಯ ರಸ್ತೆ, ಮಂತ್ರಾಲಯ ರಸ್ತೆಯಿಂದ ಗದ್ವಾಲ್ ರಸ್ತೆ, ಗದ್ವಾಲ್ ರಸ್ತೆಯಿಂದ ಹೈದ್ರಾಬಾದ್ ರಸ್ತೆಯ ಬೈಪಾಸ್ ರಸ್ತೆಗೆ ಸೇರಿಸುವ ಮೂಲಕ ರಿಂಗ್ ರಸ್ತೆ ನಿರ್ಮಿಸಲು ಪ್ರಸ್ತಾಪವಿದೆ. ಶಾಸಕ ಡಾ.ಶಿವರಾಜ ಪಾಟೀಲ್ ಅವರ ಮನವಿ ಮೇರೆಗೆ ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ರಿಂಗ್ ರಸ್ತೆ ನಿರ್ಮಾಣ, ಭೂಸ್ವಾಧೀನಕ್ಕಾಗಿ 50 ಕೋಟಿ ಅನುದಾನ ಮಂಜೂರಿ ಮಾಡಿದೆ.
ಈ ಕುರಿತು ಲೋಕೋಪಯೋಗಿ ಇಲಾಖೆ ಆಂತರಿಕ ಆರ್ಥಿಕ ಸಲಹೆಗಾರ ಡಾ.ಸೋಮನಾಥ ಅವರು ಸಂಪರ್ಕ ಮತ್ತು ಕಟ್ಟಡ (ಈಶಾನ್ಯ ವಲಯದ ) ಮುಖ್ಯ ಅಭಿಯಂತರರಿಗೆ ಅಧಿಕೃತ ಪತ್ರ ಕಳುಹಿಸಲಾಗಿದೆ. ಜಿಲ್ಲೆಗೆ ಲೋಕೋಪಯೋಗಿ ಇಲಾಖೆ ಸಚಿವರಾದ ಗೋವಿಂದ ಕಾರಜೋಳ ಆಗಮಿಸುತ್ತಿದ್ದಾರೆ. ಈ ಜಿಲ್ಲೆಯ ಬಹು ದಿನಗಳ ಬೇಡಿಕೆಯಾದ ರಿಂಗ್ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿ, ಈ ಕನಸು ನನಸಾಗುವಂತೆ ಮಾಡುವರೇ?.
ಅನೇಕ ವರ್ಷಗಳಿಂದ ನಗರದ ಜನರ ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸುವುದೇ? ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಮಾತನಾಡುವ ಗೋವಿಂದ ಕಾರಜೋಳ ಅವರು ನುಡಿದಂತೆ ನಡೆಯುವರೇ?. ಕೇಂದ್ರ ಸರ್ಕಾರ ಜಿಲ್ಲೆಯನ್ನು ಮಹತ್ವಾಕಾಂಕ್ಷಿ ಜಿಲ್ಲೆಯನ್ನಾಗಿ ಗುರುತಿಸಿದೆ. ಸಮಗ್ರಾಭಿವೃದ್ಧಿಗಾಗಿ ಅನೇಕ ಯೋಜನೆ ರೂಪಿಸುತ್ತಿದೆ. ರಸ್ತೆ ಸುಧಾರಣೆ ಕಾಮಗಾರಿಯಿಂದ ಅಭಿವೃದ್ಧಿಯೂ ಮತ್ತಷ್ಟು ವೇಗ ಪಡೆಯುವ ಹಿನ್ನೆಲೆಯಲ್ಲಿ ರಿಂಗ್ ರಸ್ತೆ ನಿರ್ಮಿಸುವ ಮೂಲಕ ಅಭಿವೃದ್ಧಿ ಪಡಿಸುವ ಮೂಲಕ ಬಿಜೆಪಿ ಜಿಲ್ಲೆಗೆ ಅಭಿವೃದ್ಧಿ ಕೊಡುಗೆ ನೀಡುವಲ್ಲಿ ಮಹತ್ವದ ಹೆಜ್ಜೆ ಇಡುವುದೇ?. ಗೋವಿಂದ ಕಾರಜೋಳ ಅವರು ರಿಂಗ್ ರಸ್ತೆ ಯೋಜನೆ ಪೂರ್ಣಗೊಳಿಸುವ ಯೋಜನೆ ಮಾಡುವರೇ?.
ನಗರದಲ್ಲಿ ರಿಂಗ್ ರಸ್ತೆ ನಿರ್ಮಾಣಕ್ಕೆ ತೀವ್ರ ಬೇಡಿಕೆಯಿದೆ. ಈಗಾಗಲೇ ಹೈದ್ರಾಬಾದ್ ರಸ್ತೆಯಿಂದ ಲಿಂಗಸೂಗೂರು ರಸ್ತೆಗೆ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಉಳಿದಂತೆ ಶೇ.75 ರಷ್ಟು ರಿಂಗ್ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 50 ಕೋಟಿ ಮಂಜೂರಾತಿ ನೀಡಲಾಗಿದೆ. ಇತ್ತೀಚಿಗೆ ನಡೆದ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ರಿಂಗ್ ರಸ್ತೆ ನಿರ್ಮಾಣಕ್ಕೆ 165 ಎಕರೆ ಜಮೀನು ಅಗತ್ಯತೆ ಬಗ್ಗೆ ಅಂದಾಜು ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ರಿಂಗ್ ರಸ್ತೆ ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ.
ಡಾ.ಶಿವರಾಜ ಪಾಟೀಲ್
ಶಾಸಕರು

Leave a Comment