ನಗರಸಭೆ-ಪುರಸಭೆ ಅಧ್ಯಕ್ಷ ಸ್ಥಾನ ವೀರಶೈವರಿಗೆ ನೀಡಿ

ರಾಯಚೂರು.ಸೆ.12- ರಾಯಚೂರು ನಗರಸಭೆ, ಮಾನ್ವಿ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಕಲ್ಪಿಸಿರುವುದರಿಂದ ವೀರಶೈವ ಲಿಂಗಾಯತ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಅಖಿಲ ಬಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಭೀಮರೆಡ್ಡಿ ಒತ್ತಾಯಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಕಳೆದ 40 ವರ್ಷಗಳಿಂದ ವೀರಶೈವ ಲಿಂಗಾಯತ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡದೇ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ವಂಚಿಸಿದ್ದಾರೆ. ಡಾ.ಸಂಗಮೇಶ್ ಸರ್ದಾರ್ ನಂತರ ಇದುವರೆಗೂ ಯಾರೂ ಅಧ್ಯಕ್ಷರಾಗಿ ಆಯ್ಕೆಯಾಗಿಲ್ಲ. ವೀರಶೈವ ಲಿಂಗಾಯತ ಸಮುದಾಯಕ್ಕೆ ರಾಜಕೀಯ ಪ್ರಾತಿನಿದ್ಯ ನೀಡುವ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಈಗಾಗಲೇ ಅಧ್ಯಕ್ಷ ಸ್ಥಾನ ನೀಡುವಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಮನವಿ ಸಲ್ಲಿಸಿ, ಈ ಕುರಿತು ಒತ್ತಾಯಿಸಲಾಗಿದೆ ಎಂದರು. ಶರಣಬಸ್ಸಪ್ಪ ಅರಳಿ ಮಾತಾಡಿ, ನಗರ ವಿಧಾನಸಭಾ ಕ್ಷೇತ್ರದಲ್ಲಿ 35 ಸಾವಿರ ವೀರಶೈವ ಲಿಂಗಾಯತ ಸಮುದಾಯದವರಿದ್ದು, ಈ ಪೈಕಿ 24 ಸಾವಿರ ಮತದಾರರಿದ್ದಾರೆ. ಅಲ್ಲದೇ ಮಾನ್ವಿ ಪುರಸಭೆ ವ್ಯಾಪ್ತಿಯಲ್ಲಿ 18 ಸಾವಿರ ಜನಸಂಖ್ಯೆಯಿದೆ. ಇದರಲ್ಲಿ 12 ಸಾವಿರ ಮತದಾರರಿದ್ದಾರೆ ಎಂದರು.
ರಾಯಚೂರು ನಗರಸಭೆ ಮತ್ತು ಮಾನ್ವಿ ಪುರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಸಾಮಾಜಿಕ ನ್ಯಾಯದಡಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕು. ನಗರಸಭೆಗೆ ಇಬ್ಬರು, ಮಾನ್ವಿ ಪುರಸಭೆಗೆ ಮೂವರು ಸದಸ್ಯರು ಆಯ್ಕೆಯಾಗಿದ್ದಾರೆಂದು ತಿಳಿಸಿದರು.
ಸೋಮಶೇಖರ ಗೌಡ, ಅಮರೇಶ ಗಲಗ, ಎಸ್.ಜಿ.ಮಲ್ಲಯ್ಯ ಉಪಸ್ಥಿತರಿದ್ದರು.

Leave a Comment