ನಗರವನ್ನು ಬೆಚ್ಚಿಬೀಳಿಸಿದ ೨ ಕೊಲೆ ಪ್ರಕರಣ! ಯುವತಿಯ ಕತ್ತು ಹಿಸುಕಿ ಹತ್ಯೆ, ಗುರುಪುರ ಹೊಳೆಯಲ್ಲಿ ಯುವಕನ ಕೊಲೆಗೈದು ಎಸೆದರು

ಮಂಗಳೂರು, ಜೂ.೮- ನಗರದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಎರಡು ಕೊಲೆ ಪ್ರಕರಣಗಳು ದಾಖಲಾಗಿವೆ. ಬ್ಯಾಂಕಿಂಗ್ ಕೋಚಿಂಗ್ ಪಡೆಯಲು ಚಿಕ್ಕಮಗಳೂರಿನಿಂದ ನಗರಕ್ಕೆ ಬಂದಿದ್ದ ವಿದ್ಯಾರ್ಥಿನಿ ಅಂಜನಾ ವಸಿಷ್ಠ(೨೨) ಅವರನ್ನು ಕತ್ತು ಹಿಸುಕಿ ಕೊಲೆಗೈಯಲಾಗಿದ್ದರೆ ನಗರದ ಕುದ್ರೋಳಿ ಗುರುಪುರ ಹೊಳೆಯಲ್ಲಿ ಅಪರಿಚಿತ ಯುವಕನ ಶವ ಕೈಕಾಲು ಬಿಗಿದು ಇರಿದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರಡೂ ಕೊಲೆ ಪ್ರಕರಣಗಳು ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದ್ದು ಪೊಲೀಸರು ಆರೋಪಿಗಳ ಶೋಧಕಾರ್ಯ ನಡೆಸುತ್ತಿದ್ದಾರೆ. ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಆರನೇ ಕೊಲೆ ಪ್ರಕರಣ ಇದಾಗಿದ್ದು ಜಿಲ್ಲೆಯ ಜನರು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಆತಂಕಗೊಂಡಿದ್ದಾರೆ.
ಪ್ರಕರಣದ ವಿವರ:
ನಿನ್ನೆ ಸಂಜೆ ಕುದ್ರೋಳಿ ಸಮೀಪದ ಗುರುಪುರ ಹೊಳೆಯಲ್ಲಿ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊಳೆಯಿಂದ ಮೇಲಕ್ಕೆತ್ತಿ ಪರಿಶೀಲಿಸಿದಾಗ ಎರಡು ಕೈಗಳನ್ನು ಬಟ್ಟೆಯ ತುಂಡಿನಿಂದ ಕಟ್ಟಿದ್ದಲ್ಲದೆ ಕುತ್ತಿಗೆಯನ್ನು ಬಿಗಿಯಲಾಗಿದ್ದು ಹೊಟ್ಟೆ ಭಾಗಕ್ಕೆ ಚೂರಿಯಿಂದ ಇರಿದು ಗಾಯಗೊಳಿಸಿರುವುದು ಕಂಡುಬಂದಿದೆ. ಈ ವ್ಯಕ್ತಿಯ ಬಗ್ಗೆ ಆಸುಪಾಸಿನಲ್ಲಿ ಯಾರಿಗೂ ಪರಿಚಯವಿಲ್ಲದ ಕಾರಣ ಈ ವ್ಯಕ್ತಿಯನ್ನು ಬೇರೆ ಎಲ್ಲೋ ಯಾರೋ ಕೊಲೆ ಮಾಡಿ ನದಿಗೆ ಬಿಸಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೃತದೇಹ ಕೊಳೆತು ಹೋಗಿದ್ದು ಎರಡು ದಿನಗಳ ಹಿಂದೆ ಕೊಲೆಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಮೃತಪಟ್ಟ ವ್ಯಕ್ತಿಗೆ ಸುಮಾರು ೩೫ರಿಂದ ೪೦ ವರ್ಷ ವಯಸ್ಸಾಗಿದೆ. ದೇಹದಲ್ಲಿ ಒಳಚಡ್ಡಿ ಮಾತ್ರ ಇದೆ. ಈ ವ್ಯಕ್ತಿಯನ್ನು ಕೊಲೆ ಮಾಡಿ ಸಾಕ್ಷ್ಯನಾಶ ಮಾಡುವ ಉದ್ದೇಶದಿಂದ ಹೊಳೆಗೆ ಬಿಸಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಬ್ಯಾಂಕಿಂಗ್ ಕೋಚಿಂಗ್ ಪಡೆಯಲು ಚಿಕ್ಕಮಗಳೂರಿನಿಂದ ಬಂದ ವಿದ್ಯಾರ್ಥಿನಿ ಅಂಜನಾ ವಸಿಷ್ಠರನ್ನು ಕೊಠಡಿಯಲ್ಲೇ ಕತ್ತು ಹಿಸುಕಿ ಹತ್ಯೆಗೈಯಲಾಗಿದ್ದು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಠಡಿಯನ್ನು ಬಾಡಿಗೆ ಪಡೆದಿದ್ದ ವಿಜಯಪುರ ಜಿಲ್ಲೆಯ ಸಂದೀಪ್ ರಾಥೋಡ್, ಅಂಜನಾಳನ್ನು ಕೊಲೆಗೈದು ಪರಾರಿಯಾಗಿರಬಹುದು ಎಂದು ಶಂಕಿಸಿ ಆತನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಅಂಜನಾ ವಸಿಷ್ಠ ಅತ್ತಾವರದ ಬಾಡಿಗೆ ಕೊಠಡಿಯಲ್ಲಿ ಕತ್ತುಹಿಸುಕಿ ಕೊಲೆ ಮಾಡಿದ ಸ್ಥಿತಿಯಲ್ಲಿ ನಿನ್ನೆ ಸಂಜೆ ಪತ್ತೆಯಾಗಿದ್ದಳು. ಉಜಿರೆಯಲ್ಲಿ ಎಂಎಸ್ಸಿ ಪೂರ್ಣಗೊಳಿಸಿದ ಬಳಿಕ ಈಕೆಗೆ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಾಗಿ ತರಬೇತಿ ಪಡೆಯಲು ಗುರುವಾರ ಬೆಳಗ್ಗೆ ಚಿಕ್ಕಮಗಳೂರಿನಿಂದ ಮಂಗಳೂರಿನಿಂದ ಬಂದಿದ್ದಳು. ಅತ್ತಾವರ ೬ನೇ ಕ್ರಾಸ್‌ನಲ್ಲಿರುವ ತನ್ನ ಸ್ನೇಹಿತ ವಿಜಯಪುರ ಮೂಲದ ಸಂದೀಪ್ ರಾಥೋಡ್ ಎಂಬವನ ಬಾಡಿಗೆ ಕೊಠಡಿಗೆ ಹೋಗಿದ್ದು ಅಲ್ಲಿ ಮಂಚದ ಸರಳಿನೆಡೆಯಲ್ಲಿ ಈಕೆಯ ಕುತ್ತಿಗೆ ಬಿಗಿದು ವಯರ್ ಸುತ್ತಿ ಕೊಲೆ ಮಾಡಲಾಗಿತ್ತು. ಸಂಜೆ ವೇಳೆ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು. ಆರೋಪಿ ಸಂದೀಪ್ ರಾಠೋಡ್ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ನೇಮಕಾತಿ ಪರೀಕ್ಷೆಗೆ ತರಬೇತಿ ಪಡೆಯಲು ಮಂಗಳೂರಿಗೆ ಆಗಮಿಸಿದ್ದ. ಜೂನ್ ೨ರಿಂದ ಅತ್ತಾವರ ೬ನೇ ಕ್ರಾಸ್‌ನ ಲೂಯಿಸ್ ಪಯಾಸ್ ಎಂಬುವವರ ಬಾಡಿಗೆ ಮನೆ ಪಡೆದುಕೊಂಡು ಅಲ್ಲಿಯೇ ವಾಸವಾಗಿದ್ದ. ಮನೆ ಬಾಡಿಗೆ ಪಡೆಯುವ ಜೂ.೨ರಂದು ಬಾಡಿಗೆ ಮನೆ ಪಡೆಯಲು ಬಂದಾಗ ಅಂಜನಾ ಕೂಡಾ ಬಂದು ಹೋಗಿದ್ದಳು. ಶುಕ್ರವಾರ ಮತ್ತೆ ಬೆಳಗ್ಗೆ ಸಂದೀಪ್ ರಾಠೋಡ್‌ನ ಬಾಡಿಗೆ ಮನೆಗೆ ಬಂದಿದ್ದು ಈ ವೇಳೆ ಮನೆ ಮಾಲೀಕರಲ್ಲಿ ನಾವಿಬ್ಬರು ಮದುವೆಯಾಗಿರುವುದಾಗಿ ಹೇಳಿದ್ದಲ್ಲದೆ ಊರಿನಿಂದ ಚಪಾತಿ ತಂದಿದ್ದೇನೆ ಕೊಡಲು ಬಂದಿರುವುದಾಗಿ ನಂಬಿಸಿ ಮನೆಯ ಮೇಲಿರುವ ಬಾಡಿಗೆ ಕೊಠಡಿಗೆ ಹೋಗಿದ್ದಳು ಎಂದು ತಿಳಿದುಬಂದಿದೆ ಅಂಜನಾ ವಸಿಷ್ಠ ಖಾತೆಯಿಂದ ಬೆಳಗ್ಗೆ ೧೦.೩೦ರ ವೇಳೆಗೆ ೫ ಸಾವಿರ ರೂಪಾಯಿ ಹಾಗೂ ೧೦ ಸಾವಿರ ರೂ ಸೇರಿದಂತೆ ಒಟ್ಟು ೧೫ ಸಾವಿರ ಡ್ರಾ ಮಾಡಲಾಗಿತ್ತು. ಹಣವನ್ನು ಆಕೆಯೇ ಡ್ರಾ ಮಾಡಿದ್ದಾಳಾ ಅಥವಾ ಆರೋಪಿ ಡ್ರಾ ಮಾಡಿದ್ದಾನಾ ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ. ಕೊಲೆಯಾದ ಅಂಜನಾ ಚಿಕ್ಕಮಗಳೂರಿನ ಮಂಜುನಾಥ್ ದಂಪತಿಯ ಏಕಮಾತ್ರ ಪುತ್ರಿಯಾಗಿದ್ದು ಈಕೆಗೆ ವಿವಾಹ ಸಂಬಂಧವೂ ಕೂಡಿಬಂದಿತ್ತು. ಹುಡುಗನನ್ನು ನೋಡಿದ ಅಂಜನಾ ತಂದೆಯ ಜತೆ ಮದುವೆ ವಿಚಾರದಲ್ಲಿ ಮುಂದುವರಿಯುವಂತೆ ಶುಕ್ರವಾರ ಬೆಳಗ್ಗೆ ಹೇಳಿದ್ದಳು.

Leave a Comment