ನಗರದಲ್ಲಿ ಹೆಚ್ಚುತ್ತಿರುವ ಯುವಕರ ಆತ್ಮಹತ್ಯೆ : ಎರಡು ದಿನಗಳಲ್ಲಿ ಮೂರು ಪ್ರಕರಣ

* ಜೂಜೂ-ಐಪಿಎಲ್ ಸಾಲದ ಒತ್ತಡಕ್ಕೆ ಸಾವಿಗೆ ಶರಣು
ರಾಯಚೂರು.ಅ.20- ನಗರದಲ್ಲಿ ಯುವಕರ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿವೆ. ಕಳೆದ ಎರಡು ದಿನಗಳಲ್ಲಿ ಮೂವರು ಯುವಕರು ಆತ್ಮಹತ್ಯೆ ಮಾಡಿಕೊಂಡ ಘಟನೆ ಯುವಕರ ಸ್ಥಿತಿಯ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಮಾಡಿದೆ.
ವಿವಿಧ ವ್ಯಸನಗಳೊಂದಿಗೆ ಜೂಜಾಟ ಹಾಗೂ ಈ ಹಿಂದೆ ನಡೆದ ಐಪಿಎಲ್ ಪಂದ್ಯಾವಳಿಗಳ ಸಾಲ ಹೊರೆಗೆ ಈಗ ಯುವಕರು ಮಾನಸಿಕ ಒತ್ತಡಕ್ಕೆ ಗುರಿಯಾಗಿ ಆತ್ಮಹತ್ಯೆಗೆ ಶರಣಾಗುವಂತಹ ದಯಾನೀಯ ಸ್ಥಿತಿ ನಿರ್ಮಾಣಗೊಂಡಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಭಾರೀ ಸದ್ದು ಮಾ‌ಡಿದ ಐಪಿಎಲ್ ಪಂದ್ಯಾವಳಿ ಸಂದರ್ಭದಲ್ಲಿ ಬೆಟ್ಟಿಂಗ್ ಮೂಲಕ ಲಕ್ಷಾಂತರ ರೂ. ಕಳೆದುಕೊಂಡು ಸಾಲಗಾರರಾದ ಯುವಕರಿಗೆ ಹೆಚ್ಚಿನ ಒತ್ತಡ‌ದಿಂದ ಪರ್ಯಾಯ ದಾರಿ ಕಾಣದೇ, ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಇದಕ್ಕೆ ಕಳೆದ ಎರಡು ದಿನಗಳಲ್ಲಿ ಮೂರು ಜನ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ. ತಾಂತ್ರಿಕ ಕಾರಣಗಳಿಗೆ ಆತ್ಮಹತ್ಯೆ ಬಗ್ಗೆ ಎಲ್ಲಿಯೂ ಪ್ರಕರಣ ದಾಖಲಾಗದಿದ್ದರೂ, ಆತ್ಮಹತ್ಯೆಗೆ ಗುರಿಯಾದ ಕುಟುಂಬಗಳಂತೂ ಈಗ ಮಕ್ಕಳು ಮಾಡಿದ ಸಾಲಕ್ಕೆ ಪರಿತಪಿಸುವಂತಹ ಪರಿಸ್ಥಿತಿ ಎದುರಿಸುವಂತಾಗಿದೆ. ಅಂತರ್ಜಾಲಗಳ ವ್ಯಾಪಕ ಬಳಕೆ ಮತ್ತು ಬೆಟ್ಟಿಂಗ್‌ನೊಂದಿಗೆ ಜೂಜಾಟ ಹಾಗೂ ಕುಡಿತದಂತಹ ಪ್ರಕರಣಗಳಿಂದ ಯುವಕರ ಜೀವನ ದಾರುಣಗೊಳ್ಳುವಂತೆ ಮಾಡಿದೆ.
ತಂದೆ-ತಾಯಿಗೆ ತಿಳಿಯದಂತೆ ಸಾಲದ ಸುಳಿಗೆ ಸಿಕ್ಕು, ಹೊರ ಬರಲಾಗದೆ, ಮಾನಸಿಕ ಖಿನ್ನತೆಗೆ ಗುರಿಯಾಗಿ ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ನಗರದಲ್ಲಿ ರಾಜಕೀಯ ಮುಖಂಡರೊಬ್ಬರ ಪುತ್ರ ಇತ್ತೀಚಿಗೆ ಆತ್ಮಹತ್ಯೆಗೆ ಶರಣಾಗಿದ್ದನು. ಈ ಸಾವಿಗೆ ಐಪಿಎಲ್ ಬೆಟ್ಟಿಂಗ್ ಕಾರಣ ಎನ್ನುವ ಚರ್ಚೆ ವ್ಯಾಪಕವಾಗಿದೆ. ಐಪಿಎಲ್ ಸಂದರ್ಭದಲ್ಲಿ ಸುಮಾರು 80 ಲಕ್ಷ ಸಾಲ ಮಾ‌ಡಿರುವುದೇ ಕಾರಣವೆಂದು ಹೇಳಲಾಗುತ್ತಿದೆ.
ಇಷ್ಟೊಂದು ಭಾರೀ ಪ್ರಮಾಣದ ಸಾಲಕ್ಕೆ ತುತ್ತಾದ ಮಗನ ಸಮಸ್ಯೆ ಪರಿಹರಿಸಲಾಗದ ತಂದೆ-ತಾಯಿಗಳ ಅಸಹಾಯಕತೆ ಒಂದೆಡೆಯಾದರೇ, ಮತ್ತೊಂದೆಡೆ ಸಾಲಗಾರರ ಕಾಟದ ಒತ್ತಡದಿಂದ ಹರಿಹರಿಯದ ಯುವಕರು ಆತ್ಮಹತ್ಯೆಗೆ ಶರಣಾಗುವ ದಾರುಣ ಹೆಚ್ಚುತ್ತಿದೆ. ಒಂದಿಲ್ಲೊಂದು ಕಡೆ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸದ ಕಾರಣ ಈ ಘಟನೆಗಳು ಸಹಜ ಸಾವಿನಲ್ಲಿ ಸಮಾಧಿಯಾಗುತ್ತಿವೆ.
ಸಮಾಜ ವಿರೋಧಿ ಚಟುವಟಿಕೆಗಳು ತಲೆಯೆತ್ತದಂತೆ ಮತ್ತು ವಿವಿಧ ವ್ಯಸನಗಳಿಗೆ ಒಳಗಾಗದಂತೆ ಪೊಲೀಸ್ ಮತ್ತು ಪಾಲಕರು ಏನೆಲ್ಲಾ ಪ್ರಯತ್ನ ಮಾ‌ಡಿದರೂ, ಯುವಕರ ಆತ್ಮಹತ್ಯೆ ತಡೆಯುವುದು ಪ್ರಸ್ತುತ ಬಹುದೊಡ್ಡ ಸವಾಲಾಗಿದೆ. ಅಂಗೈಯಲ್ಲೇ ಸಾಮಾಜಿಕ ಜಾಲತಾಣದ ಅಪಾಯಕಾರಿ ಆಟಗಳು ಒಂದೆಡೆಯಾದರೇ, ಮತ್ತೊಂದೆಡೆ ಬೆಟ್ಟಿಂಗ್ ಯುವ ಜನರ ದೈನಂದಿನ ಜೀವನವನ್ನೇ ಅಲ್ಲೋಲ ಕಲ್ಲೋಲ ಮಾಡಿವೆ.
ಈ ರೀತಿಯ ಪ್ರಕರಣಗಳು ಪ್ರತಿಯೊಂದು ಕುಟುಂಬಕ್ಕೂ ಆತಂಕಕಾರಿಯಾಗಿ ಮಾರ್ಪಟ್ಟಿವೆ. ಮಕ್ಕಳ ಮೇಲೆ ಪಾಲಕರು ನಿಗಾವಹಿಸುವುದರೊಂದಿಗೆ ಅಕ್ರಮ ಚಟುವಟಿಕೆಗಳಿಂದ ದೂರ ಉಳಿಯುವ ಜಾಗೃತಿ ನೀಡುವ ಅಗತ್ಯವಿದೆ. ಮತ್ತೊಂದೆಡೆ ಪೊಲೀಸರು ಯುವಕರ ಪಾಲಿಗೆ ಮರಣ ಶಾಸನ ಬರೆಯುವ ಸಾಮಾಜಿಕ ನಿಷಿದ್ಧ ಚಟುವಟಿಕೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಇಲ್ಲದಿದ್ದರೇ, ಯುವಕರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುವುದನ್ನು ನಿಯಂತ್ರಿಸುವುದು ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ.

Leave a Comment