ನಗರದಲ್ಲಿ ಸ್ವಿಗ್ಗಿ ಸರಬರಾಜು ಬಂದ್

ಬಳ್ಳಾರಿ, ಮೇ.14: ಗ್ರಾಹಕರಿಗೆ ಬೇಕಾದಲ್ಲಿಗೆ ಆಹಾರ ಪದಾರ್ಥವನ್ನು ಪೂರೈಸುತ್ತಿದ್ದ ಸ್ವಿಗ್ಗಿ ಕಂಪನಿಯ ಡೆಲಿವರಿ ಬಾಯ್ ಗಳ ಮುಷ್ಕರದಿಂದ ಇಂದು ಸ್ವಿಗ್ಗಿ ಸರಬರಾಜು ನಗರದಲ್ಲಿ ಸ್ಥಗಿತಗೊಂಡಿದೆ.

ದಿನಪ್ರತಿ ನಗರದ ಹಲವು ವಿವಿಧ ಹೋಟೆಲ್ ಗಳಿಂದ ಗ್ರಾಹಕರು ಬೇಕೆಂದು ಆರ್ಡರ್ ಮಾಡುವ ತಿಂಡಿ ತಿನಿಸು ಊಟವನ್ನು ಪಾರ್ಸೆಲ್ ಮೂಲಕ ಪಡೆದು ಗ್ರಾಹಕರ ಮನೆಗೆ ತಲುಪಿಸುತ್ತಿದ್ದರು.

ಈ ವ್ಯವಹಾರ ಉತ್ತಮವಾಗಿ ನಡೆದಿತ್ತು. ಡೆಲಿವರಿ ಬಾಯ್ ಗಳಿಗೆ ಸ್ವಿಗ್ಗಿ ಕಂಪನಿ ಆರಂಭದಲ್ಲಿ ಉತ್ತಮ ಸೇವಾಧರ ನೀಡುತ್ತಿತ್ತು. ಇದರಿಂದ ಮಾಸಿಕ ಕನಿಷ್ಟ 12 ರಿಂದ 20 ಸಾವಿರ ರೂಪಾಯಿ ಪಡೆಯುತ್ತಿದ್ದರು.

ಆದರೆ ಈಗ ಏಕಾಏಕಿ ಸ್ವಿಗ್ಗಿ ಕಂಪನಿ ದಿನಕ್ಕೆ 300 ರೂಪಾಯಿ ಮಾತ್ರ ನೀಡುತ್ತಿದೆ. ಇದರಿಂದ ನಮ್ಮ ದುಡಿಮೆಗೆ ತಕ್ಕ ವೇತನ ದೊರೆಯಲ್ಲ. ಅದಕ್ಕಾಗಿ ಈ ಮೊದಲಿನಂತೆಯೇ ನಮಗೆ ಅಲವೆನ್ಸ್ ಮತ್ತು ನಿಗಧಿತ ವೇತನ ನೀಡಬೇಕು ಎಂದು ಸ್ವಿಗ್ಗಿ ಡೆಲಿವರಿ ಬಾಯ್ ಗಳಾದ ಎಸ್.ಯಲ್ಲಾರೆಡ್ಡಿ, ಹನುಮಂತ ಭಂಡಾರಿ, ಪ್ರದೀಪ್, ವಿಶ್ವನಾಥ, ದೊಡ್ಡ ಬಸಪ್ಪ ಮೊದಲಾದವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಿನ್ನೆಯಿಂದಲೇ ಸರಬರಾಜು ನಿಲ್ಲಿಸಿ ನಿನ್ನೆ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ ಅವರು, ಇಂದು ಮಯೂರ ಹೋಟೆಲ್ ಆವರಣದಲ್ಲಿ ಸೇರಿ ಈ ಹಿಂದಿನಂತೆಯೇ ಅಲವೆನ್ಸ್ ನೀಡಬೇಕು ಎಂದು ಒಗ್ಗಟ್ಟಿನ ಧ್ವನಿಯಲ್ಲಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.

ಸ್ಥಿರ ಆದಾಯಕ್ಕೆ ಬದ್ದ
ಸ್ವಿಗ್ಗಿಯ ವಿತರಣಾ ಪಾಲುದಾರರು ನಮ್ಮ ಸೇವೆಯ ಹೃದಯವಿದ್ದಂತೆ ಮತ್ತು ಬಳ್ಳಾರಿಯಲ್ಲಿ ನಮ್ಮ ಸೇವೆಯು ಯಶಸ್ವಿಯಾಗಲು ಅವರದು ಪ್ರಮುಖ ಪಾತ್ರವಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ನಾವು ಸ್ಥಿರವಾದ ವೇತನ ಮತ್ತು ಭತ್ಯೆಗಳನ್ನು ನೀಡಲು ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಈ ವೇತನಗಳು ಫೀಲ್ಡ್‍ನಲ್ಲಿರುವ ನಮ್ಮ ಪಾಲುದಾರರ ಪ್ರಯತ್ನಗಳಿಗೆ ಹೊಂದಿಕೊಂಡಿರುತ್ತವೆ ಮತ್ತು ಪೀಕ್‍ಅವರ್ ಮತ್ತುಅವರು ವಿತರಣೆ ಮಾಡುವ ದೂರವನ್ನು ಭತ್ಯೆಗಳಿಗೆ ಪರಿಗಣನೆ ಮಾಡಲಾಗುತ್ತದೆ. ಜನತೆಗೆಅತ್ಯುತ್ತಮ ಸೇವೆ ಸಲ್ಲಿಸುವ ಮೂಲಕ ಅತ್ಯುತ್ಕೃಷ್ಠವಾದ ಆಹಾರದ ಅನುಭವವನ್ನು ನೀಡುವ ನಮ್ಮ ಬದ್ಧತೆಯನ್ನು ಮುಂದುವರಿಸುತ್ತೇವೆ. ಮತ್ತೊಂದೆಡೆ ವಿತರಣಾ ಪಾಲುದಾರರಿಗೆ ಸ್ಥಿರವಾಗಿ ಆದಾಯ ಒದಗಿಸಲು ನಾವು ಬದ್ಧರಾಗಿದ್ದೇವೆಎಂದು ಸ್ವಿಗ್ಗಿಯ ಸಹ ವಕ್ತಾರರು ತಿಳಿಸಿದ್ದಾರೆ.

Leave a Comment