ನಗರದಲ್ಲಿ ಸಿರಿಧಾನ್ಯ ಮೇಳ

ಬೆಂಗಳೂರು, ಜ.೧೩- ಸಾವಯವ ಕೃಷಿ ಮತ್ತು ಸಿರಿಧಾನ್ಯ ಬೆಳೆಗೆ ಉತ್ತೇಜನ ನೀಡಲು ನಗರದ ಅರಮನೆ ಮೈದಾನದಲ್ಲಿ ಇದೇ ೧೯ರಿಂದ ೨೧ರವರೆಗೆ ಅಂತಾರಾಷ್ಟ್ರೀಯ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ-೨೦೧೮ವನ್ನು ಆಯೋಜಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ನಗರದಲ್ಲಿಂದು ಅರಮನೆ ಮೈದಾನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂರು ದಿನಗಳ ಮೇಳದಲ್ಲಿ ರಾಜ್ಯಾದ್ಯಂತ ೧೦ ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದಾರೆ.

 ಅಮೆರಿಕ, ಜರ್ಮನಿ, ಸ್ವಿಡ್ಜರ್ಲೆಂಡ್, ಯುಎಇ, ದಕ್ಷಿಣ ಕೊರಿಯಾ, ಉಗಾಂಡ, ಚೀನಾ ಮತ್ತು ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳ ೨೨೫ ಕಂಪನಿಗಳು ಭಾಗವಹಿಸಲಿವೆ. ಬ್ರಿಟಾನಿಯಾ, ನೆಸ್ಲೆ, ಮಯ್ಯಾಸ್, ನಾಮಧಾರಿ, ಫ್ಲಿಪ್‌ಕಾರ್ಟ್‌ನಂತಹ ಬೃಹತ್ ಕಂಪನಿಗಳ ಹಾಗೂ ಕೆಲವು ಚಿಲ್ಲರೆ ವಹಿವಾಟು ಕಂಪನಿಗಳ ಪ್ರಮುಖರು ಭಾಗವಹಿಸಲಿದ್ದಾರೆ. ೬೩ ಸಂವಾದಗಳು ನಡೆಯಲಿವೆ ಎಂದರು.

ಮೊದಲ ಬಾರಿಗೆ ರಾಷ್ಟ್ರಮಟ್ಟದ ಜೈವಿಕ್ ಇಂಡಿಯನ್ ಪ್ರಶಸ್ತಿಯನ್ನು ಕೃಷಿ, ರಫ್ತು, ಬ್ರಾಂಡಿಂಗ್, ರಿಟೇಲ್ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೂ ನೀಡಲಾಗುವುದು ಎಂದು ನುಡಿದರು.

ಸಿರಿಧಾನ್ಯಗಳಿಂದ ತಯಾರಿಸಿದ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಮೇಳದಲ್ಲಿ ಪರಿಚಯಿಸಲಾಗುವುದು. ವಿದ್ಯಾರ್ಥಿಗಳಿಗೆ ಪೋಸ್ಟರ್ ತಯಾರಿ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ ಎಂದು ತಿಳಿಸಿದರು.

ಸಿರಿಧಾನ್ಯಗಳಲ್ಲಿ ದೇಹಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳೂ ಲಭ್ಯ. ಮಧುಮೇಹ ಇರುವವರಿಗೆ ಇದು ಒಳ್ಳೆಯದು. ದೇಹದಲ್ಲಿರುವ ಕೊಲೆಸ್ಟರಾಲ್ ಪ್ರಮಾಣವನ್ನು ಇದು ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಯನ್ನೂ ನಿಯಂತ್ರಿಸುತ್ತದೆ. ದಿನದಲ್ಲಿ ಒಂದು ಹೊತ್ತಿನ ಊಟಕ್ಕಾದರೂ ಇವುಗಳನ್ನು ಬಳಸಿ. ಮಕ್ಕಳಲ್ಲಿ ಬುದ್ಧಿಶಕ್ತಿಯನ್ನು ಇದು ಹೆಚ್ಚಿಸುತ್ತದೆ’ ಎಂದು ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ಕೃಷಿ ಇಲಾಖೆಯ ಆಯುಕ್ತ ಸತೀಶ್, ಮನೋಜ್ ಮೆನನ್, ಎಂ.ಎಸ್.ರಾಮಯ್ಯ ಹೋಟೆಲ್ ಮ್ಯಾನೇಜ್ಮೆಂಟ್ ನ ಪ್ರಿಯ ಅರ್ಜುನ್, ಹಾಸನ ಕೃಷಿ.ವಿವಿ.ಡೀನ್ ಡಾ.ದೇವಕುಮಾರ್, ಕೃಷಿ.ವಿವಿ.ಡೀನ್, ಹಾಸನ ಸೇರಿದಂತೆ ಪ್ರಮುಖರಿದ್ದರು.

Leave a Comment