ನಗರದಲ್ಲಿ ನಾಯಿಗಳಿಗೆ ಮಗುವೊಂದು ಬಲಿ

* ಜಿಲ್ಲಾಡಳಿತ, ನಗರಸಭೆ ನಿರ್ಲಕ್ಷ್ಯಗೆ ಈ ಸಾವು ಸಾಕ್ಷಿ
ರಾಯಚೂರು.ಫೆ.20- ನಗರದಲ್ಲಿ ನಾಯಿಗಳ ನಿಯಂತ್ರಣಕ್ಕೆ ಸ್ಥಳೀಯರಿಂದ ಎಷ್ಟೇ ಒತ್ತಾಯ ಮಾಡಿದರೂ, ಕ್ಯಾರೆ ಎನ್ನದ ಜಿಲ್ಲಾಡಳಿತ, ನಗರಸಭೆ ನಿರ್ಲಕ್ಷ್ಯೆಗೆ ನಿನ್ನೆ 4 ವರ್ಷದ ಮಗುವೊಂದು ನಾಯಿಗಳಿಗೆ ಬಲಿಯಾದ ದಾರುಣ ಘಟನೆಗೆ ಕಾರಣವಾಯಿತು.
ನಗರದ ಅರಬ್ ಮೊಹಲ್ಲಾ ವೃತ್ತದಲ್ಲಿ ಈ ಹೃದಯ ವಿದ್ರಾಹಕ ಘಟನೆ ನಡೆದಿದೆ. ಬಿಜಾಪೂರಿನಿಂದ ಮದುವೆಗೆಂದು ಆಗಮಿಸಿದ ಕುಟುಂಬ ಈ ಘಟನೆಯಿಂದ ಮದುವೆ ಸಂಭ್ರಮದ ಸಂತಸ ಕಳೆದು ಮನೆಯಲ್ಲಿ ಸೂತಕ ಮೂಡುವಂತೆ ಮಾಡಿದೆ. ನತದೃಷ್ಟ ಮಗು ಸುರಕ್ಷಾ ಆಸ್ಪತ್ರೆಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯನ್ನು ನಾಯಿಗಳನ್ನು ಮನೋ ಇಚ್ಛೆ ಕಚ್ಚಿ ಕೊಂದಿವೆ. ನಾಯಿಗಳ ಎಳೆದಾಟದಲ್ಲಿ ಮಗುವಿನ ಹೊಟ್ಟೆಯ ಕರುಳು ಹೊರ ಬಂದಿದ್ದವು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ನಗರದಲ್ಲಿ ನಾಯಿಗಳ ಹಾವಳಿ ತೀವ್ರವಾಗಿದೆ. ಅನೇಕ ಕಡೆ ನಾಯಿ ಕಚ್ಚುವಿಕೆಯ ಘಟನೆಗಳು ನಡೆದಿವೆ. ನಾಯಿಗಳ ನಿಯಂತ್ರಣಕ್ಕೆ ಪದೇ ಪದೇ ಒತ್ತಾಯಿಸಿದರೂ, ಯಾರು ಸ್ಪಂದಿಸುತ್ತಿಲ್ಲ. ನಾಯಿಗಳ ಸಂತತಿ ಹೆಚ್ಚುತ್ತಲೇ ಇದೆ. ಯಾವ ರಸ್ತೆ, ಬಡಾವಣೆಗೆ ಹೋದರೂ ನೂರಾರು ಸಂಖ್ಯೆಯಲ್ಲಿ ನಾಯಿಗಳು ಓಡಾಡುವುದು ಕಾಣಬಹುದು. ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿ ನಗರಸಭೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ.
ವಯೋ ವೃದ್ಧರೂ ಮತ್ತು ಮಕ್ಕಳ ಪಾಲಿಗೆ ಈ ನಾಯಿಗಳು ಜೀವ ತಿನ್ನುವ ಅಪಾಯದ ಮಟ್ಟಕ್ಕೆ ಬೆಳೆದಿವೆ. ಈ ಬೀದಿ ನಾಯಿಗಳ ಕಾಟಕ್ಕೆ ಜನ ಭಯ ಭೀತದಿಂದ ಅಲೆಯುವಂತೆ ಮಾಡಿದೆ. ಇನ್ನಾದರೂ ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ತಕ್ಷಣವೇ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮುಂದಾಗುವರೇ? ಅಥವಾ ಮತ್ತಷ್ಟು ಬಲಿಯಾಗುವುದಕ್ಕೆ ಕಾರಣರಾಗುವರೇ?.

Leave a Comment