ನಗರದಲ್ಲಿ ದಲಿತ  ಹೋರಾಟಗಾರರ ಸಮಾವೇಶ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಸೆ. ೧- ದಕ್ಷಿಣ ಭಾರತ ದಲಿತ ಹೋರಾಟಗಾರರ ಸಮಾವೇಶ ಸೆ.6ರಂದು ನಗರದ ಸೆನೆಟ್ ಹಾಲ್‌ನಲ್ಲಿ ನಡೆಯಲಿದೆ.

ಅಂದು ಮಧ್ಯಾಹ್ನ 2 ಗಂಟೆಗೆ ಸಮಾವೇಶ ಆರಂಭಗೊಳ್ಳಲಿದೆ. ದಲಿತರ ವಿರುದ್ಧ ನಡೆಯುತ್ತಿರುವ ಎಲ್ಲ ದೌರ್ಜನ್ಯಗಳ ವಿರುದ್ಧ ಸಮಾವೇಶ ಹಾಗೂ ಸಮಾಜ ಸಂಘಟನೆಗೆ ಕರೆ ನೀಡಲಾಗುತ್ತಿದೆ. ಗುಜರಾತ್ ಶಾಸಕ ದಲಿತ ಹೋರಾಟಗಾರ ಜಿಜ್ಞೇಶ್ ನೇವಾನಿ ಸಮಾವೇಶ ಉದ್ಘಾಟಿಸಲಿದ್ದಾರೆ ಎಂದು ದಲಿತ ಹೋರಾಟಗಾರ ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂಬೇಡ್ಕರ್ ಹೆಸರಿನಲ್ಲಿ ದಲಿತ ಸಂಘಟನೆ ಕಟ್ಟಿದರೆ ನಿಷೇಧಿಸುವ ಹುನ್ನಾರ ನಡೆಯುತ್ತಿದೆ. ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ಬೀದಿಗಿಳಿದು ಹೋರಾಟ ಮಾಡುವ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಹೋರಾಟಕ್ಕೆ ನಿಂತವರನ್ನು ಗುಂಡಿಟ್ಟು ಕೊಲ್ಲಲಾಗುತ್ತಿದೆ. ಗತಕಾಲದ ಹೋರಾಟದ ನೆನಪಿನಲ್ಲಿ ಸಂಭ್ರಮಿಸುವ ಆಗಿಲ್ಲ. ಸಂಭ್ರಮಿಸಿದರೆ ನಕ್ಸಲ್ ಹಣೆಪಟ್ಟಿ ಹೊರಬೇಕಾಗುತ್ತದೆ ಎಂದರು. ದಲಿತರೇ ತಮ್ಮ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಪ್ರಾಮಾಣಿಕವಾಗಿ ದನಿ ಎತ್ತುವಂತಿಲ್ಲ. ದಲಿತರನ್ನು ನಿರ್ಬಂಧಿಸುವ ಹಲವಾರು ಘಟನೆಗಳು ನಡೆದು ಹೋಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಲಿತರ ಮೇಲಿನ ದೌರ್ಜನ್ಯಗಳಲ್ಲಿ ಭಾಗಿಯಾಗಿವೆ ಎಂದರು.

ದಲಿತರ ರಕ್ಷಣೆಗಾಗಿ ನೀಡಿರುವ ಸಂವಿಧಾನಾತ್ಮಕ ಮತ್ತು ಕಾನೂನಾತ್ಮಕ ರಕ್ಷಣೆಗಳನ್ನು ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದೆ. ಅಸ್ಪೃಶ್ಯತೆ ಆಚರಣೆ ಸಂವಿಧಾನಿಕವಾಗಿ ನಿಷೇಧಗೊಂಡಿದ್ದರೂ ಸಮಾಜದಲ್ಲಿ ಜೀವಂತವಾಗಿದೆ. ಮನುವಾದಿಗಳು ಪರಿಶಿಷ್ಟರ ಮೇಲಿನ ದೌರ್ಜನ್ಯ ಕಾಯ್ದೆ ದುರ್ಬಲಗೊಳಿಸುತ್ತಿದ್ದಾರೆ ಎಂದು ತಿಳಿಸಿದರು. ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ರಕ್ಷಿಸಿ ಬಲಪಡಿಸಬೇಕು. ಅದನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಬೇಕು. ದಲಿತ ಹೋರಾಟಗಾರರ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು. ಜೈಭೀಮ್ ಸೇನೆಯ ಚಂದ್ರಶೇಖರ್ ರಾವಣರನ್ನು ಕೂಡಲೇ ಬಿಡುಗಡೆಮಾಡಬೇಕು.

ಬಡ್ತಿ ಮೀಸಲಾತಿಯನ್ನು ಪುನಹ ಜಾರಿಗೊಳಿಸಬೇಕು. ಒಳಮೀಸಲಾತಿಗಾಗಿ ಉಷಾಮೆಹರಾ ವರದಿಗೆ ಶಿಫಾರಸ್ಸು ಅನುಷ್ಟಾನಗೊಳಿಸಬೇಕು. ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಸಮಾವೇಶದ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ವೇದಿಕೆಯಲ್ಲಿ ದಲಿತ ಮುಖಂಡರಾದ ವಿ. ನಾಗರಾಜ್, ಗೌರಿ ಮತ್ತಿತರರು ಉಪಸ್ಥಿತರಿದ್ದರು.

Leave a Comment