ನಗರದಲ್ಲಿ ‘ಟ್ರಾಫಿಕ್ ಪಾಠಶಾಲಾ’ ಅಭಿಯಾನ ಕಾರ್ಯಕ್ರಮ

ಮೈಸೂರು. ಜು.18: ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಮೈಸೂರು ಪೊಲೀಸರ ಸಹಯೋಗದಲ್ಲಿ ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ ‘ಟ್ರಾಫಿಕ್ ಪಾಠಶಾಲಾ’ ಅಭಿಯಾನವನ್ನಿಂದು ಹಮ್ಮಿಕೊಳ್ಳಲಾಗಿದ್ದು ಅರಿವು ಮೂಡಿಸಲಾಯಿತು.
ಕಾರ್ಯಕ್ರಮವನ್ನು ಮೈಸೂರು ನಗರದ ಅಸಿಸ್ಟೆಮಟ್ ಕಮೀಷನರ್ ಆಫ್ ಪೊಲೀಸ್ ಜಿ.ಎನ್.ಮೋಹನ್ ಉದ್ಘಾಟಿಸಿದರು. ಅವರೊಂದಿಗೆ ಎಚ್ ಡಿಎಫ್ ಸಿ ಬ್ಯಾಂಕ್ ನ ಕರ್ನಾಟಕ ಕ್ಲಸ್ಟರ್ 5ರ ಕ್ಲಸ್ಟರ್ ಹೆಡ್ ರಘುರಾಮನ್ ಉಪಸ್ಥಿತರಿದ್ದು ‘ಟ್ರಾಫಿಕ್ ಪಾಠಶಾಲಾ’ ಸ್ವಯಂ ಸೇವಕರ ರ್ಯಾಲಿಗೆ ಚಾಲನೆ ನೀಡಿದರು.
ಈ ಅಭಿಯಾನದಿಂದ ಸುಮಾರು 8.93ಲಕ್ಷ ಜನರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಈ ಅಭಿಯಾನವು ನಗರದ ತಿರುವುಗಳಾದ ರಾಮಸ್ವಾಮಿ ವೃತ್ತ, ಕೆ.ಆರ್.ವೃತ್ತ, ಮೆಟ್ರೋಪೋಲ್ ವೃತ್ತ, ಟೆರೆಸಿಯನ್ ವೃತ್ತ, ವಿಜಯಾ ಬ್ಯಾಂಕ್ ವೃತ್ತ, ಅಪೋಲೋ ಆಸ್ಪತ್ರೆ ವೃತ್ತ, ಕೆ.ಆರ್.ವೃತ್ತ, ಪಾಠಶಾಲಾ ವೃತ್ತ, ಐಶ್ವರ್ಯ ಪೆಟ್ರೋಲ್ ಬಂಕ್, ಪಡುವಾರಹಳ್ಳಿ ವೃತ್ತ ಮತ್ತು ಬೋಗಾದಿ ರಿಂಗ್ ರಸ್ತೆಯ ಜಂಕ್ಷನ್ ಗಳಲ್ಲಿ ನಡೆಯಲಿದೆ. ಈ ಜಾಗೃತಿ ಮೂಡಿಸುವ ರ್ಯಾಲಿಯಲ್ಲಿ ಸ್ವಯಂಸೇವಕರ ಗುಂಪು ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಉದ್ಯೋಗಿಗಳಿದ್ದು ಎಲ್ಲ ಪ್ರಮುಖ ವೃತ್ತಗಳಲ್ಲಿ ಸಾಗಿತು. ಸ್ವಯಂ ಸೇವಕರು ಜನರಿಗೆ ರಸ್ತೆಯ ಸುರಕ್ಷತೆಯ ನಿಯಮಗಳನ್ನು ಅನುಸರಿಸಿ ಎಂದು ಸಂದೇಶ ಸಾರುವ ಭಿತ್ತಿಪತ್ರಗಳನ್ನು ಹಿಡಿದು ಸಂಚರಿಸಿ ಟ್ರಾಫಿಕ್ ಶಿಸ್ತು ಅನುಸರಿಸುವ ಚಾಲಕರಿಗೆ ಸ್ವಯಂಸೇವಕರು ಪುರಸ್ಕಾರಗಳನ್ನು ನೀಡುವ ಮೂಲಕ ಉತ್ತೇಜಿಸಿದರು. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರನ್ನು ಟ್ರಾಫಿಕ್ ಪಾಠಶಾಲಾದಲ್ಲಿ ದಾಖಲಿಸಿಕೊಂಡು ಅವರಿಗೆ ಸುರಕ್ಷತೆಯ ಬೇಕು ಬೇಡಗಳ ಕುರಿತು ತಿಳುವಳಿಕೆ ನೀಡಿದರು.
ಹೆಚ್ ಡಿಎಫ್ ಸಿ ಬ್ಯಾಂಕ್ ನ ರಘುರಾಮನ್ ಮಾತನಾಡಿ ಮೈಸೂರು ಪೊಲೀಸರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಉದ್ಘಾಟಿಸಲು ನಾವು ಬಹಳ ಉತ್ಸಾಹಿಗಳಾಗಿದ್ದೆವು. ಟ್ರಾಫಿಕ್ ಪಾಠಶಾಲಾದೊಂದಿಗೆ ನಾವು ನಗರದ ಸಾರ್ವಜನಿಕರಿಗೆ ರಸ್ತೆಯ ಸುರಕ್ಷತೆ ಬೇಕು ಮತ್ತು ಬೇಡಗಳ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಅಪಘಾತಗಳು ಮತ್ತು ಮರಣಗಳು ಹೆಚ್ಚಾಗಿ ಸಂಭವಿಸುತ್ತಿರುವ ನಗರದಲ್ಲಿ ಇದು ಪ್ರಸ್ತುತ ಅಗತ್ಯವಾದ ಅಭಿಯಾನ ಎಂದು ನಂಬಿದ್ದೇವೆ ಎಂದರು.
ಅಭಿಯಾನದಲ್ಲಿ ಹಲವರು ಪಾಲ್ಗೊಂಡಿದ್ದರು.

Leave a Comment