ನಗರದಲ್ಲಿ ಎಸಿಬಿ ದಾಳಿ ಗಣಿ ಇಲಾಖೆ ಅಧಿಕಾರಿ ಮನೆಯಲ್ಲಿ ಮುಂದುವರಿದ ಪರಿಶೀಲನೆ

ಮಂಗಳೂರು, ಜೂ.೧೨- ಇಂದು ಬೆಳ್ಳಂಬೆಳಿಗ್ಗೆ ನಗರದ ಸಕಾರಿ ಅಧಿಕಾರಿಯೊಬ್ಬರ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಎಇ ಮಹಾದೇವಪ್ಪ ಅವರ ನಗರದಲ್ಲಿರುವ ಮನೆ, ಬೆಂಗಳೂರಿನ ಸಿದ್ದೇನಹಳ್ಳಿಯಲ್ಲಿರುವ ಮನೆ, ಚಿತ್ರದುರ್ಗದ ಕಣಿವೆಹಳ್ಳಿ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಎಸಿಬಿ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮನೆ ಹಾಗು ಕಚೇರಿಯಲ್ಲಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಸ್ತಿ ಸೇರಿದಂತೆ ಇತರ ಸೊತ್ತುಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ, ಖಚಿತ ಮಾಹಿತಿ ಕಲೆಹಾಕಿ ಎಸಿಬಿ ಅಧಿಕಾರಿಗಳು ವಿವಿಧೆಡೆ ಏಕಾಏಕಿ ದಾಳಿ ನಡೆಸಿದ್ದಾರೆ. ಬೆಂಗಳೂರು, ಮಂಗಳೂರು, ಧಾರವಾಡ, ಬೆಳಗಾವಿ, ಉತ್ತರಕನ್ನಡ ಸೇರಿದಂತೆ ಹಲವು ಕಡೆ ಅಧಿಕಾರಿಗಳ ಮನೆ ಮೇಲೆ ದಾಳೆ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.

Leave a Comment