ನಗರಕ್ಕೆ ಗಜಪಡೆ ಬಂತು… ಮೈಸೂರು ದಸರಾಗೆ ಕಳೆ ತಂತು…

ಮೈಸೂರು, ಆ.25: ರಾಜ್ಯದಲ್ಲಿ ಪ್ರವಾಹ, ಜಲಪ್ರಳಯದಂತಹ ಪ್ರಕೃತಿ ವಿಕೋಪ, ಬರದ ನಡುವೆಯೂ ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ಸಿದ್ಧತೆಗಳು ಆರಂಭವಾಗಿವೆ. ಈಗಾಗಲೇ ಮೈಸೂರು ನಗರಕ್ಕೆ ಬಂದಿರುವ ದಸರಾ ಜಂಬೂ ಸವಾರಿಯ ಗಜಪಡೆಗಳು ಇನ್ನೂ ಅರಮನೆಯನ್ನು ಪ್ರವೇಶಿಸದೆ ಅರಣ್ಯ ಭವನದಲ್ಲಿ ಬೀಡುಬಿಟ್ಟಿವೆ.
ಬೇರೆ ಬೇರೆ ಆನೆ ಶಿಬಿರಗಳಿಂದ ಎರಡು ಹಂತದಲ್ಲಿ ಗಜಪಡೆ ಮೈಸೂರು ಅರಮನೆಗೆ ಆಗಮಿಸಲಿದ್ದು, ಇದೀಗ ಅಂಬಾರಿ ಹೊರುವ ಅರ್ಜುನನ ನೇತೃತ್ವದ ಅಭಿಮನ್ಯು, ಧನಂಜಯ, ಈಶ್ವರ, ವಿಜಯ ಹಾಗೂ ವರಲಕ್ಷ್ಮಿ ಆನೆಗಳು ಅರಣ್ಯದಲ್ಲಿ ಬೀಡು ಬಿಟ್ಟಿವೆ. ಇನ್ನೊಂದು ದಿನ ಅಲ್ಲಿಯೇ ವಾಸ್ತವ್ಯ ಹೂಡಲಿರುವ ಗಜಪಡೆಯನ್ನು ಆ.26ರಂದು ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಜಿಲ್ಲಾಡಳಿತ ಪೂಜೆ ಸಲ್ಲಿಸಿ ಸಂಪ್ರದಾಯಬದ್ಧವಾಗಿ ಅರಮನೆಗೆ ಸ್ವಾಗತ ನೀಡಲಾಗುವುದು.
ಅರಮನೆಗೆ ಗಜಪಡೆಯನ್ನು ಸ್ವಾಗತಿಸುವ ಕಾರ್ಯಕ್ರಮದ ವೇಳೆ ಭವ್ಯ ಮೆರವಣಿಗೆ ನಡೆಯಲಿದ್ದು, ಡೊಳ್ಳುಕುಣಿತ, ವೀರಗಾಸೆ, ಮಂಗಳವಾದ್ಯದೊಂದಿಗೆ ಗಜಪಡೆಯನ್ನು ಕರೆದೊಯ್ಯಲಾಗುವುದು. ಆ ನಂತರ ಅರಮನೆ ಪ್ರವೇಶಿಸುವ ಸಂದರ್ಭ ಸಾಂಪ್ರದಾಯಿಕ ಆಚರಣೆ ನಡೆಯಲಿದ್ದು, ಚಾಮುಂಡಿಬೆಟ್ಟದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ಅವರು ಪೂಜೆ ಸಲ್ಲಿಸಲಿದ್ದಾರೆ.
ಈಗಾಗಲೇ ಅರಮನೆ ಆವರಣದಲ್ಲಿ ಗಜಪಡೆಗಳಿಗಾಗಿ ಟೆಂಟ್ ‌ಗಳನ್ನು ಹಾಕಲಾಗುತ್ತಿದ್ದು, ಅಲ್ಲಿ ಆನೆಗಳಿಗೆ ಮತ್ತು ಅವುಗಳನ್ನು ನೋಡಿಕೊಳ್ಳುವ ಮಾವುತರು, ಕಾವಾಡಿಗಳ ಕುಟುಂಬಗಳಿಗೂ ವಾಸ್ತವ್ಯ ಹೂಡಲಿವೆ. ಜತೆಗೆ ಕುಟುಂಬಗಳಿಗೆ ಅವಶ್ಯಕವಿರುವ ಸಾಮಗ್ರಿಗಳ ಕಿಟ್‌ನ್ನು ನೀಡಲಾಗುತ್ತದೆ.
ಇದೀಗ ಅರಣ್ಯಭವನದಲ್ಲಿರುವ ಗಜಪಡೆಯನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ. ಅಂಬಾರಿ ಹೊರುವ ಅರ್ಜುನನೊಂದಿಗೆ ಈ ಬಾರಿ ಈಶ್ವರ ಎಂಬ ಆನೆಯೂ ಬಂದಿದ್ದು, ಇದು ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವುದರಿಂದ ಇದರತ್ತ ಜನ ನೋಟ ಬೀರುತ್ತಿದ್ದಾರೆ. ಗಜಪಡೆ ಅರಮನೆ ಆವರಣ ಪ್ರವೇಶಿಸಿದ ಬಳಿಕ ವಿವಿಧ ಹಂತಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಅರಮನೆಯಿಂದ ಸಯ್ಯಾಜಿರಾವ್ ರಸ್ತೆಗಾಗಿ ಬನ್ನಿಮಂಟಪಕ್ಕೆ ಜಂಬೂ ಸವಾರಿಯ ತಾಲೀಮು ಆರಂಭವಾಗಲಿದೆ.
ಮೊದಲಿಗೆ ಯಾವುದೇ ಭಾರವಿಲ್ಲದೆ ಗಜಪಡೆ ತಾಲೀಮು ನಡೆಸಲಿದ್ದು, ನಂತರ ಮರಳು ಮೂಟೆಯನ್ನೊಳಗೊಂಡ ಭಾರದ ತಾಲೀಮು, ನಂತರ ಮರದ ಅಂಬಾರಿಯ ತಾಲೀಮು ನಡೆಯಲಿದೆ. ಇದರ ನಡುವೆ ಸಿಡಿಮದ್ದಿನ ತಾಲೀಮು ಕೂಡ ನಡೆಯಲಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈಗಾಗಲೇ ಗಜಪಡೆಗಳು ಮೈಸೂರಿಗೆ ಆಗಮಿಸಿರುವುದರಿಂದ ದಸರಾ ಕಳೆ ಕಾಣುತ್ತಿದೆ, ದಸರಾ ಮಹೋತ್ಸವದ ಚಟುವಟಿಕೆಗಳು ಗರಿಗೆದರಲಿವೆ.
ಸೆಲ್ಫಿಗೆ ಜನವೋ ಜನ
ದಸರಾ ಜಂಬೂ ಸವಾರಿಗೆ ಮೈಸೂರಿನ ಅರಣ್ಯ ಭವನಕ್ಕೆ ಆಗಮಿಸಿರುವ ಆನೆಗಳು ಸದ್ಯಕ್ಕೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ಇವುಗಳನ್ನು ನೋಡಿ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜನ ಇದೀಗ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಬಿಗಿ ಭದ್ರತೆಯಲ್ಲಿ ಆನೆಗಳನ್ನು ಇರಿಸಲಾಗಿದ್ದು, ಅಂಬಾರಿ ಆನೆ ಅರ್ಜುನನ ಮೇಲೆ ವಿಶೇಷ ಕಣ್ಗಾವಲಿದೆ. ಈ ಆನೆಗಳನ್ನು ನೋಡಲು ಚಿಕ್ಕ ಚಿಕ್ಕ ಮಕ್ಕಳೊಂದಿಗೆ ತಂಡೋಪತಂಡವಾಗಿ ಅರಣ್ಯ ಭವನಕ್ಕೆ ಜನರು ಆಗಮಿಸುತ್ತಿದ್ದಾರೆ. ಹಾಗಾಗಿ ಆನೆಗಳ ಬಳಿ ಮಾವುತರು ಹಾಗೂ ಕಾವಾಡಿಗಳು ಕಡ್ಡಾಯವಾಗಿ ಇರುವಂತೆ ಸೂಚನೆ ಸಹ ನೀಡಲಾಗಿದೆ.

Leave a Comment