ನಕ್ಸಲ್ ಬಂಧನ ಸ್ಫೋಟಕ ಸಾಮಗ್ರಿ ವಶ

ಮೇದಿನಿ ನಗರ್ (ಜಾರ್ಖಂಡ್), ಜ. ೪- ಮಾವೊವಾದಿ ನಕ್ಸರೊಬ್ಬರನ್ನು ಭದ್ರತಾ ಪಡೆಗಳು ಬಂಧಿಸಿರುವ ಬೆನ್ನಲ್ಲೆ ಮತ್ತೊಂದೆಡೆ ನಕ್ಸಲರಿಗೆ ಸೇರಿದ ಸ್ಫೋಟಕ ಸಾಮಗ್ರಿಗಳನ್ನು ನಕ್ಸಲ್ ನಿಗ್ರಹ ದಳ ವಶಪಡಿಸಿಕೊಂಡಿರುವ ಘಟನೆ ಜಾರ್ಖಂಡ‌ನಲ್ಲಿ ನಡೆದಿದೆ.
ಜಾರ್ಖಂಡ್‌ನಲ್ಲಿ ನಕ್ಸಲ್ ನಿಗ್ರಹ ದಳದ ಪೊಲೀಸರು ನಕ್ಸಲ್ ಪತ್ತೆ ಕಾರ್ಯಾಚರಣೆ ಸಂದರ್ಭದಲ್ಲಿ ಪಲಮಾವು ಜಿಲ್ಲೆಯಲ್ಲಿ ಮಾವೊವಾದಿ ನಕ್ಸಲರೊಬ್ಬನನ್ನು ಬಂಧಿಸಿದ್ದಾರೆ.
ಅದೇ ರೀತಿ ಲೇಟೆಹರ್ ಜಿಲ್ಲೆಯಲ್ಲಿ ನಕ್ಸಲರ ಪತ್ತೆ ಕಾರ್ಯಾಚರಣೆ ಸಂದರ್ಭದಲ್ಲಿ ನಕ್ಸಲರಿಗೆ ಸೇರಿದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಾಲಮಾವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಂದ್ರಜಿತ್ ಮಹತಾ ಹೇಳಿದರು.
ಬಂಧಿತನಾಗಿರುವ ಮಾವೊವಾದಿ ನಕ್ಸಲನನ್ನು ಸುದೇಶ್ವರ್ ಬುಯಾನ್ ಎಂದು ಗುರುತಿಸಲಾಗಿದ್ದು, ಈತ ಕಳೆದ 15 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಮಾವೊವಾದಿ ಚಳವಳಿಯಲ್ಲಿ ಸಕ್ರಿಯನಾಗಿದ್ದ ಸುದೇಶ್ವರ ಬುಯಾನ್‌ನನ್ನು ನಕ್ಸಲ್ ನಿಗ್ರಹ ಪಡೆ ಇಂದು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ಲೇಟೆಹರ್ ಜಿಲ್ಲೆಯಲ್ಲಿ ನಕ್ಸಲರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ರಾಣಿದಾಹ್ ಅರಣ್ಯ ಪ್ರದೇಶದಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಇದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲಾಟೇಹರ್ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಆನಂದ್ ಹೇಳಿದರು.
ವಶಪಡಿಸಿಕೊಂಡಿರುವ ಸ್ಫೋಟಕಗಳಲ್ಲಿ 3 ಗ್ರೆನೇಡ್, 5 ಐಇಡಿಗಳು, 3 ಬಂಡಲ್, ಕಾಟೆಕ್ಸ್ ವೈರ್, 2 ಬಂಡಲ್ ಎಲೆಕ್ಟ್ರಿಕ್ ವೈರ್‌ಗಳು ಸೇರಿದೆ ಎಂದು ಅವರು ಹೇಳಿದರು.

Leave a Comment