ನಕ್ಸಲ್‌ನ ಅಂತ್ಯ ಸಂಸ್ಕಾರದಲ್ಲಿ ವರವರ ರಾವ್: ವರದಿ ಬಹಿರಂಗ

ನವದೆಹಲಿ, ಆ. ೩: ಕೊರೆಗಾಂವ್ ಭೀಮಾ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಗೃಹ ಬಂಧನಕ್ಕೆ ಒಳಗಾಗಿರುವ ಐವರು ಚಳವಳಿಗಾರರ ಪೈಕಿ, ಕ್ರಾಂತಿಕಾರಿ ಕವಿ ಹಾಗೂ ಪತ್ರಕರ್ತ ವರವರರಾವ್ ಈ ಹಿಂದೆ ಸಿ.ಪಿ.ಐ. (ಮಾವೋವಾದಿ) ಕಮಾಂಡರೊಬ್ಬರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರೆಂಬ ಮಾಹಿತಿಯನ್ನು ಕೇಂದ್ರ ಗುಪ್ತಚರ ಸಂಸ್ಥೆ ಬಿಡುಗಡೆ ಮಾಡಿದೆ.

ಮಹಾರಾಷ್ಟ್ರದ ಗಡಚಿರೋಲಿ ಬಳಿ ಏಪ್ರಿಲ್‌ನಲ್ಲಿ ಮಾವೋವಾದಿಗಳ ವಿರುದ್ಧ ನಡೆದಿದ್ದ ಕಾರ್ಯಾಚರಣೆಯಲ್ಲಿ ಗುಂಡೇಟಿಗೆ ಬಲಿಯಾಗಿದ್ದ ಕಮಾಂಡರೊಬ್ಬರ ಅಂತ್ಯಕ್ರಿಯೆಯಲ್ಲಿ ವರವರ ರಾವ್ ಭಾಗವಹಿಸಿದ್ದರು. ಇಷ್ಟೇ ಅಲ್ಲದೆ, ೨೦೧೬ ಅಕ್ಟೋಬರ್‌ನಲ್ಲಿ ಒರಿಸ್ಸಾದ ಮಲ್ಕಂಗಿರಿ ಎಂಬಲ್ಲಿ ಮಾವೋವಾದಿಗಳ ವಿರುದ್ಧ ಭದ್ರತಾ ಪಡೆಗಳು ನಡೆಸಿದ್ದ ಕಾರ್ಯಾಚರಣೆಯಲ್ಲಿ ಗುಂಡೇಟಿಗೆ ಬಲಿಯಾದ ಸಿಪಿಐ (ಮಾವೋವಾದಿ) ವಿಭಾಗೀಯ ಸಮಿತಿ ಸದಸ್ಯ ಕಾಪುಕ ಪ್ರಭಾಕರ್ ಅವರ ಮರಣದ ಮೊದಲ ವರ್ಷದ ಶ್ರದ್ಧಾಂಜಲಿ ಸಭೆಯಲ್ಲೂ ಇದೇ ವರವರ ರಾವ್ ಪಾಲ್ಗೊಂಡಿದ್ದರು ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಮಾವೋವಾದಿಗಳ ಕ್ರಾಂತಿಕಾರಿ ಪ್ರಜಾಸತ್ತಾತ್ಮಕ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾವೋವಾದಿ ಅಂಗ ಸಂಸ್ಥೆಗಳೆನಿಸಿದ ವಿವಿಧ ಸಂಘಟನೆಗಳ ಸಂಯೋಜಕರೆನಿಸಿದ ವರವರ ರಾವ್ ಕಡತಗಳನ್ನು ಗುಪ್ತಚರ ಸಂಸ್ಥೆ ಇದೀಗ ಬಿಚ್ಚುತ್ತಿದೆ. ಆ ಪ್ರಕಾರ ರಾವ್ ಈ ಹಿಂದೆ ಏಪ್ರಿಲ್ ೨೫ ರಂದು ತೆಲಂಗಾಣದ ಜಯಶಂಕರ್-ಭೂಪಲಪಲ್ಲಿ ಜಿಲ್ಲೆಯಲ್ಲಿ ನಡೆದಿದ್ದ ನಕ್ಸಲೀಯ ಶ್ರೀಕಾಂತ್ ಅಲಿಯಾಸ್ ಶ್ರೀನು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಏಪ್ರಿಲ್ ೨೨ ರಂದು ನಕ್ಸಲೀಯರ ವಿರುದ್ಧ ನಡೆದಿದ್ದ ಅತ್ಯಂತ ಯಶಸ್ವಿ ಹಾಗೂ ಭಾರೀ ಕಾರ್ಯಾಚರಣೆಯಲ್ಲಿ ಹತರಾದ ೩೯ ನಕ್ಸಲರ ಪೈಕಿ ಈ ಶ್ರೀನು ಸಹ ಒಬ್ಬನಾಗಿದ್ದ.

Leave a Comment