ನಕ್ಸಲರ ಮತ್ತೆ ಅಟ್ಟಹಾಸ ನಾಲ್ವರ ಬಲಿ

ದಾಂತೇವಾಡ, ನ. ೮- ಛತ್ತೀಸ್‌ಗಡ ವಿಧಾನಸಭಾ ಚುನಾವಣೆಗೆ ಇನ್ನು ಮೂರು ದಿನ ಇರುವಾಗಲೇ ನಕ್ಸಲರು ದಾಳಿಗಳನ್ನು ತೀವ್ರಗೊಳಿಸಿದ್ದು, ನಕ್ಸಲರ ದಾಳಿಗೆ ಒಬ್ಬ ಸಿಐಎಸ್‌ಎಫ್ ಯೋಧ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲರು ಸಿಐಎಸ್‌ಎಫ್ ವಾಹನಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಸಿಐಎಸ್‌ಎಫ್ ಯೋಧರು ಇದ್ದ ಬಸ್‌ನ್ನು ಬಾಂಬ್ ಇಟ್ಟು ಸ್ಫೋಟಿಸಲಾಗಿದೆ.

ಈ ಸ್ಫೋಟದಲ್ಲಿ ಸಿಐಎಸ್‌ಎಫ್ ಯೋಧ ಮತ್ತು ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳು ಹೇಳಿವೆ. ಛತ್ತೀಸ್‌ಘಡ ವಿಧಾನಸಭಾ ಚುನಾವಣೆ ಮೂರು ದಿನ ಬಾಕಿ ಉಳಿದಿದ್ದು, ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ.

ಸಿಐಎಸ್‌ಎಫ್ ವಾಹನಗಳನ್ನು ಗುರಿಯಾಗಿಸಿ ಆ ಬಾಂಬ್ ದಾಳಿ ನಡೆಸಲಾಗಿದ್ದು, ನಕ್ಸಲ್‌ಪೀಡಿತ ದಾಂತೇವಾಡ ಜಿಲ್ಲೆಯಲ್ಲಿ ನಡೆದಿರುವ ಈ ಬಾಂಬ್ ಸ್ಫೋಟದಲ್ಲಿ ಇಬ್ಬರು ಸಿಐಎಸ್‌ಎಫ್ ಯೋಧರು ಗಾಯಗೊಂಡಿದ್ದಾರೆ.

ಛತ್ತೀಸ್‌ಘಡದ ದಾಂತೇವಾಡದಲ್ಲಿ ಕಳೆದವಾರ ನಕ್ಸಲರು ನಡೆಸಿದ ದಾಳಿಗೆ ದೂರದರ್ಶನದ ಕ್ಯಾಮರಾಮೆನ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದರು. ಈ ಘಟನೆ ಬೆನ್ನಲ್ಲೆ ಸುಮಾರು 60ಕ್ಕೂ ಹೆಚ್ಚು ನಕ್ಸಲರು ಶರಣಾಗಿದ್ದರು. ಈಗ ಮತ್ತೆ ನಕ್ಸಲರು ತಮ್ಮ ದಾಳಿಗಳನ್ನು ತೀವ್ರಗೊಳಿಸಿದ್ದು, ಭದ್ರತಾಪಡೆಯ ಯೋಧರನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸುತ್ತಿದ್ದಾರೆ.

ದಾಂತೇವಾಡ ಜಿಲ್ಲೆಯಲ್ಲಿ ಇಂದು ಭದ್ರತಾಕಾರ್ಯಗಳಿಗೆ ನಿಯೋಜನೆಗೊಂಡಿದ್ದ ಯೋಧರ ವಾಹನಗಳನ್ನು ಗುರಿಯಾಗಿಸಿ ಬಾಂಬ್ ಸ್ಫೋಟ ನಡೆಸಿರುವ ನಕ್ಸಲರು, ತಮ್ಮ ಈ ದಾಳಿಗೆ ನಾಲ್ವರನ್ನು ಬಲಿ ಪಡೆದಿದ್ದಾರೆ.

ನಕ್ಸಲರ ದಾಳಿಯಿಂದ ಯೋಧರ ವಾಹನಗಳಿಗೆ ಹಾನಿಯಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದಾರೆ.

Leave a Comment