ನಕಲಿ ವೈದ್ಯರ ಮೇಲೆ ದಾಳಿ-ಪರಿಶೀಲನೆ

ಕುಂದಗೋಳ,ನ27 :ನಕಲಿ ವೈದ್ಯರನ್ನು ಗುರುತಿಸಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪಟ್ಟಣದ ಖಾಸಗಿ ಆಸ್ಪತ್ರೆಗಳ ಮೇಲೆ ಮಂಗಳವಾರ  ದಾಳಿಮಾಡಿ ದಾಖಲೆಗಳನ್ನು ಪರಿಶೀಲಿಸಲಾಯಿತು.
ಒಂದು ಚಿಕಿತ್ಸಾಲಯವು ಯಾವುದೇ ಪರವಾನಿಗೆ ಇಲ್ಲದೇ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ಇಲ್ಲದೇ ಇರುವುದರಿಂದ  ಆಸ್ಪತ್ರೆಯನ್ನು ಸೀಜ ಮಾಡಲಾಗಿದೆಂದು ತಹಶೀಲ್ದಾರ ಬಸುರಾಜ ಮೆಳವಂಕಿ ಹೇಳಿದರು
ತಾಲೂಕಿನಲ್ಲಿ ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗಿದ್ದು ಅನಧೀಕೃತವಾಗಿ ವೈದ್ಯರೆಂದು ಹೇಳಿಕೊಂಡು ರೋಗಿಗಳಿಗೆ ಚಿಕತ್ಸೆ ನೀಡುತ್ತಿದ್ದಾರೆ, ಅದಕ್ಕೆ ಕಡಿವಾಣಹಾಕಲು ಮುನ್ಸೂಚನೆ ಇಲ್ಲದೆ ಆಯಾ ಆಸ್ಪತ್ರೆಗಳಿಗೆ ಭೇಟಿನೀಡಿ ಪರಿಶೀಲಿಸಿ ಸೀಜ್ ಮಾಡಲಾಗುತ್ತಿದೆ. ಪಟ್ಟಣದ ಡಾ: ಮುಲ್ಲಾ ಅವರ ದವಾಖಾನೆಯನ್ನು ಪರೀಶೀಲಿಸಿದಾಗ ಯಾವುದೇ ದಾಖಲಾತಿ ಇಲ್ಲದಿರುವುದು ಕಂಡು ಬಂದ ಹಿನ್ನಲೆಯಲ್ಲಿ ಸೀಜ್ ಮಾಡಲಾಗಿದೆ. 25 ರಿಂದ 30 ಜನ ತಾಲೂಕಿನಲ್ಲಿ ನಕಲಿ ವೈದ್ಯರು ಇದ್ದಾರೆ ಎಂದು ಮಾಹಿತಿ ಬಂದಿದ್ದು, ಅಂತವರು ನೀಡುವ ಚಿಕಿತ್ಸೆ ಹಾಗೂ ಅವರ ಆಸ್ಪತ್ರೆಗಳನ್ನು ತಕ್ಷಣ ಸೀಜ್ ಮಾಡಲು ಯಾರಿಗೂ ಮುನ್ಸೂಚನೆ ನೀಡದೆ ದಾಳಿನಡೆಸಿ ಮುನ್ನುಗ್ಗಲು ನಮ್ಮ ಸಮಿತಿ ಸಿದ್ಧವಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವವರು ತಮ್ಮ-ತಮ್ಮ ಓದಿಗೆ ತಕ್ಕಂತೆ ಚಿಕಿತ್ಸೆ ವಿಧಾನವನ್ನು ಅನುಸರಿಸಬೇಕಾಗಿದ್ದು, ಅದಕ್ಕೂ ಮೀರಿ ಚಿಕಿತ್ಸೆ ನೀಡಲು ಮುಂದಾದರೆ ಅಂತವರ ವಿರುದ್ಧ ಸೂಕ್ತ ಕ್ರಮ ಹಾಗೂ ಕೂಡಲೇ ಅಂತವರ ಆಸ್ಪತ್ರೆಯನ್ನು ಸೀಜ್ ಮಾಡಲಾಗುತ್ತದೆ ಎಂದರು.
ನಂತರ ಪಟ್ಟಣದ ಭಗವಾನ ಮಹಾವೀರ ಆಸ್ಪತ್ರೆಗೆ ಭೇಟಿನೀಡಿ ವೈದ್ಯ ಎಸ್.ಪಿ.ಕೊಕಾಟೆ ಅವರನ್ನು ವಿಚಾರಣೆಗೊಳಪಡಿಸಿದರು. ಆಸ್ಪತ್ರೆಯಲ್ಲಿದ್ದ ಔಷಧಿಗಳನ್ನು ವೀಕ್ಷಿಸಿದ ಡಾ: ಭಾಗೀರಥಿ ಅವರು ಕೊಕಾಟೆ ಅವರನ್ನು ಪ್ರಶ್ನಿಸುತ್ತ ಈ ಎಲ್ಲವೂ ಅಲೋಪತಿಕ್ ಔಷಧಿಗಳಾಗಿವೆ. ಈ ಔಷಧಿಗಳನ್ನು ರೋಗಿಗಳಿಗೆ ನೀಡುವ ಅರ್ಹತೆ ನಿಮಗಿಲ್ಲ ಎಂದಾಗ ರೋಗಕ್ಕೆ ಸಮೀಪಿಸಿದ ಔಷಧಿಗಳಾಗಿದ್ದು, ಆಯುರ್ವೇದಿಕ್ ಜೊತೆಗೂಡುತ್ತವೆ. ಎಂದು ಹೇಳಿದರು. ನಿಮ್ಮ ಸೇವಾ ಪ್ರಮಾಣಪತ್ರ ಕೊಡಿ ಎಂದು ಕೇಳಿದಾಗ ತರುತ್ತೇನೆ ಎಂದು ವೈದ್ಯ ಕೊಕಾಟೆ ಮನೆಗೆ ಹೋದವರು ಸಾಕಷ್ಟು ಸಮಯ ತೆಗೆದುಕೊಂಡ ನಂತರ ಆಸ್ಪತ್ರೆಯಲ್ಲಿದ್ದ ಕಂಪೌಂಡರೊಬ್ಬರಿಗೆ ಕಚೇರಿಗೆ ಬಂದು ಭೇಟಿ ಮಾಡಲು ತಿಳಿಸಿದ ನಂತರ ಸಮಿತಿಯ ತಂಡ ಬಸ್ ನಿಲ್ದಾಣ ಹತ್ತಿರದ ಪ್ರಣವ ದವಾಖಾನೆಗೆ ಭೇಟಿ ನೀಡಿದಾಗ ತೆರೆದಿರುವ ದವಾಖಾನೆಯಲ್ಲಿ ಯಾರೂ ಇರದ ಕಾರಣ ಸ್ವಲ್ಪ ಹೊತ್ತು ಕಾಯ್ದು ದೂರವಾಣಿ ಮೂಲಕ ಮಾತನಾಡಿದಾಗ ನನಗೆ ಸ್ವಲ್ಪ ಕೆಲಸವಿದೆ ಇನ್ನೂ ಅಲ್ಲಿಗೆ ಬರುವದು ತಡವಾಗುತ್ತದೆ ಎಂದು ಹೇಳಿದರು. ತಹಶೀಲ್ದಾರ ಬಸುರಾಜ ಮೆಳವಂಕಿ ದೂರವಾಣಿಯಲ್ಲಿ ಮಾತನಾಡಿ ಇಲ್ಲಿಗೆ ನಾವು ಬಂದು ಬಹಳ ಹೊತ್ತಾಯ್ತು. ನೀವು ನಮ್ಮ ಕಚೇರಿಗೆ ಬಂದು ನಿಮ್ಮೆಲ್ಲ ದಾಖಲೆಗಳನ್ನು ನೀಡಿ ಪರಿಶೀಲಿಸಿಕೊಂಡು ಸಮರ್ಪಕವಾಗುವವರೆಗೆ ಆಸ್ಪತ್ರೆ ಬಾಗಿಲು ತೆರೆಯಕೂಡದು ಎಂದು ಸೂಚಿಸಿ ಬೇರೆ ಆಸ್ಪತ್ರೆಗೆ ತೆರಳಿದರು. ಇದೇ ರೀತಿ ಪಟ್ಟಣದಲ್ಲಿನ ಒಟ್ಟು 5 ದವಾಖಾನೆಗಳಿಗೆ ತಂಡವು ದಿಢೀರ್‍ನೆ ಭೇಟಿನೀಡಿ ಪರಿಶಿಲನೆ ನಡೆಸಿತು.
ಕುಂದಗೋಳ ಪಿಎಸ್‍ಐ ಎಸ್.ಎನ್.ಚಲವಾದಿ, ಗುಡಗೇರಿ ಪಿಎಸ್‍ಐ ನವೀನ ಜಕ್ಕಲಿ ಹಾಗೂ ಸಿಬ್ಬಂದಿ, ಅಲ್ಲದೆ ದಾಳಿ ನಡೆಸುವ ತಂಡದ ಸಮಿತಿಯ ಸಹ ಸಿಬ್ಬಂದಿಗಳಿದ್ದರು.

Leave a Comment