ನಕಲಿ ಪ್ರಮಾಣ ಪತ್ರ ಮಾಡಿಕೊಡುತ್ತಿದ್ದ ಮಧ್ಯವರ್ತಿ ಬಂಧನ

ತುಮಕೂರು, ಮೇ ೧೪- ಮಹಾನಗರ ಪಾಲಿಕೆಯಲ್ಲಿ ಜನಸಾಮಾನ್ಯರನ್ನು ನಂಬಿಸಿ ಅವರಿಂದ ಹಣ ಪಡೆದು ನಕಲಿ ಪ್ರಮಾಣ ಪತ್ರಗಳನ್ನು ಮಾಡಿಕೊಡುತ್ತಿದ್ದ ಮಧ್ಯವರ್ತಿಯನ್ನು ಇಲ್ಲಿನ ತಿಲಕ್‌ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಬೆಳ್ಳಾವಿ ಹೋಬಳಿಯ ದೊಡ್ಡಬೀರನಹಳ್ಳಿ ಗ್ರಾಮದ ಸಿದ್ದಲಿಂಗಯ್ಯ (68) ಎಂಬಾತನೇ ಬಂಧಿತ ವ್ಯಕ್ತಿ.

ತುಮಕೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನನಗೆ ಗೊತ್ತು, ಮರಣ ಹಾಗೂ ಜನನ ಪ್ರಮಾಣ ಪತ್ರಗಳನ್ನು ಶೀಘ್ರವಾಗಿ ಮಾಡಿಸಿಕೊಡುತ್ತೇನೆಂದು ಸಾರ್ವಜನಿಕರನ್ನು ನಂಬಿಸಿ ಅವರಿಂದ ಹಣ ವಸೂಲಿ ಮಾಡಿಕೊಂಡು ನಕಲಿ ದೃಢೀಕರಣ ಪತ್ರಗಳನ್ನು ಮಾಡಿಕೊಡುತ್ತಿದ್ದನೆನ್ನಲಾಗಿದೆ.

ಈತನಿಂದ ಪ್ರಮಾಣ ಪತ್ರ ಪಡೆದಿದ್ದವರು ಪಾಲಿಕೆ ಅಧಿಕಾರಿಗಳಿಗೆ ತೋರಿಸಿದಾಗ ಈ ದಾಖಲೆಗಳು ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಸಾರ್ವಜನಿಕರು ಮಹಾನಗರ ಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದರು. ನಂತರ ಈ ಮಧ್ಯವರ್ತಿಯ ವಿರುದ್ಧ ಪಾಲಿಕೆ ತಿಲಕ್‌ಪಾರ್ಕ್ ಪೊಲೀಸ್ ಠಾಣೆಗೆ ದೂರು ಸಹ ನೀಡಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ತಿಲಕ್‌ಪಾರ್ಕ್ ಠಾಣೆಯ ಪೊಲೀಸರು ಡಿವೈಎಸ್ಪಿ ತಿಪ್ಪೇಸ್ವಾಮಿ, ಸಿಪಿಐ ರಾಧಾಕೃಷ್ಣ ಮಾರ್ಗದರ್ಶನದಲ್ಲಿ ಲಕ್ಷ್ಮಯ್ಯ ಮತ್ತು ಸಿಬ್ಬಂದಿವರ್ಗ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Comment