ನಕಲಿ ದಾಖಲೆ ಸೃಷ್ಠಿಸಿ ನಿವೇಶನ ಅಕ್ರಮ ಮಾರಾಟ: ಆರೋಪ

ತುಮಕೂರು, ಆ. ೩- ತಿಪಟೂರು ನಗರಭೆ ವ್ಯಾಪ್ತಿಯ ಸುಮಾರು 4 ನಿವೇಶನಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡುವ ವಿಚಾರದಲ್ಲಿ  ನಗರದ ಶ್ರೀ ರುದ್ರಮುನಿ ಸ್ವಾಮೀಜಿಯವರೇ ಪ್ರಮುಖರು. ಅವರ ನೇತೃತ್ವದಲ್ಲಿಯೇ ಈ ನಕಲಿ ದಾಖಲೆಗಳ ನಿವೇಶನ ಮಾರುವ ವಂಚನೆ ಕೆಲಸ ನಡೆಯುತ್ತಿದೆ ಎಂದು ತಿಪಟೂರು ಟಿ.ಎ.ಪಿ.ಸಿ.ಎಂ.ಎಸ್. ಮಾಜಿ ಅಧ್ಯಕ್ಷ ಹೆಚ್.ಎಸ್.ದೇವರಾಜ್ ಹಾಗೂ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಆರೋಪಿಸಿದರು.
ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ತಿಪಟೂರು ಪುರಸಭೆಯ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಗೂ ಕಂಚಘಟ್ಟದ ಶ್ರೀ ರುದ್ರಮುನಿ ಸ್ವಾಮಿಗಳು ಸೇರಿ ವಿಜಯಕುಮಾರ್ ಮತ್ತು ಸುಲೋಚನಾ ಎಂಬ ಮೂಲ ವಾರಸುದಾರರಿಗೆ ಸೇರಿದ ನಿವೇಶನಗಳ ದಾಖಲೆಗಳನ್ನು ತಿರುಚಿ, ನಗರಸಭೆ ಅಧಿಕಾರಿಗಳೊಂದಿಗೆ ಸೇರಿಕೊಂಡು, ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಾರೆ,  ಮೇಲ್ಕಡ ಇಬ್ಬರೂ ಮೃತಪಟ್ಟಿದ್ದು, ಇವರ ಸ್ವತ್ತಿಗೆ ಮಠದಲ್ಲಿಯೇ ಅಡುಗೆ ಕೆಲಸ ಮಾಡಿಕೊಂಡಿದ್ದ ಶಿವಶಂಕರ್ ಎಂಬಾತನ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಸಲಾಗಿದೆ ಎಂದು ದೂರಿದರು.
ಮೂಲ ಮಾಲೀಕರ ಹಡುಕಾಟ ಮಾಡಲಾಗಿ ಸುಲೋಚನಾ ಅವರು ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನು 2015ರಲ್ಲಿ ವಿಲ್ ಮಾಡಿ ಅದರಲ್ಲಿ ತನ್ನ ಗಂಡ ವಿಜಯಕುಮಾರ್ ನನ್ನನ್ನು ಬಿಟ್ಟು ಓಡಿ ಹೋಗಿದ್ದು, ನನ್ನ ಪಾಲಿನ ಆಸ್ತಿಯೆಲ್ಲಾ ನನ್ನ ತಂಗಿಯರಿಗೆ ಸೇರಬೇಕೆಂದು ಬರೆದಿದ್ದರು. ಆದರೆ, ಸ್ವಾಮೀಜಿ ಮತ್ತು ಖಾದರ್ ಅವರು ಸೇರಿ ಜೀವಂತವಾಗಿರುವ ಸುಲೋಚನಾ ಹಾಗೂ ವಿಜಯಕುಮಾರ್ ಅವರ ಮರಣ ಪ್ರಮಾಣ ಪತ್ರವನ್ನು ಮಾಡಿಸಿ ಇವರ ವಂಶವೃಕ್ಷದಲ್ಲಿಯೇ ಇಲ್ಲದ ಶಿವಶಂಕರ್ ಹೆಸರಿಗೆ ಖಾತೆ ಬದಲಾವಣೆ ಮಾಡಿಸಿದ್ದಾರೆ ಎಂದು ಹೇಳಿದರು.
ಈ ಖಾತೆ ಬದಲಾವಣೆ ನಂತರ ಅದನ್ನೇ ಆಧಾರವನ್ನಾಗಿಸಿಕೊಂಡು ಬ್ಯಾಂಕ್‍ವೊಂದರಲ್ಲಿ ಸಾಲ ಪಡೆಯಲು ಮುಂದಾಗಿ ವಿಫಲರಾಗಿರುತ್ತಾರೆ. ನಂತರ ಇದೇ ಆಸ್ತಿಯನ್ನು ಹಲವರಿಗೆ ಮಾರಾಟ ಮಾಡುವ ಸೋಗಿನಲ್ಲಿ ಬಹಳಷ್ಟು ಮಂದಿಗೆ ಮೋಸ ಮಾಡಿರುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ದಾಖಲೆಗಳ ಸಹಿತ ಜಿಲ್ಲಾಧಿಕಾರಿಗಳಿಗೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರು ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಈ ಬಗ್ಗೆ ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವುದು ಸೂಕ್ತ. ಇದೊಂದು ಉದಾಹರಣೆ ಇರಬಹುದು. ತಿಪಟೂರು ನಗರದಲ್ಲಿ ಇಂತಹ ಇನ್ನೂ ಎಷ್ಟೋ ಪ್ರಕರಣಗಳಿರಬಹುದು. ಅಮಾಯಕ ಜನ ಇಂತಹವರ ಮೋಸದ ಜಾಲಕ್ಕೆ ಬಿದ್ದು, ತಮ್ಮ ಶ್ರಮದ ಹಣ ಮತ್ತು ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ. ಕೂಡಲೇ ಈ ಪ್ರಕರಣದ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

Leave a Comment