ನಕಲಿ ದಾಖಲೆ, ಕ್ರಮಕ್ಕೆ ಆಗ್ರಹ

ಬೆಂಗಳೂರು, ಫೆ. ೧೭- ಬೃಹತ್ ಮಳೆ ನೀರು ಕಾಲುವೆ ಪುನರ್ ನಿರ್ಮಾಣ ಮತ್ತು ನವೀಕರಣ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ 6 ಪ್ಯಾಕೇಜ್‌ಗಳ ಪೈಕಿ 02 ಪ್ಯಾಕೇಜ್‌ಗಳಿಗೆ ನಕಲಿ ದಾಖಲೆ ಸಲ್ಲಿಸಿರುವ ಗುತ್ತಿಗೆದಾರರೊಬ್ಬರಿಗೆ ನೀಡಿರುವ ಕಾರ್ಯಾದೇಶ ಪತ್ರ ಕಾನೂನುಬಾಹಿರವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಬಿಎಂಟಿಎಫ್ ಪೊಲೀಸರಿಗೆ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಅವರು ದೂರು ಸಲ್ಲಿಸಿದ್ದಾರೆ.
ಗುತ್ತಿಗೆದಾರರಾದ ಟಾಮ್ ಟಾಮ್ ಪೆದ್ದ ಗುರುವಾರೆಡ್ಡಿ ಗುತ್ತಿಗೆದಾರರಿಗೆ ಕಾನೂನುಬಾಹಿರವಾಗಿ ಬೃಹತ್ ಮಳೆ ನೀರುಕಾಲುವೆ ಮುಖ್ಯ ಅಭಿಯಂತರ ಸಿದ್ದೇಗೌಡ ಅವರು ಕಾರ್ಯಾದೇಶ ಪತ್ರವನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ಯಾಕೇಜ್ 02ರ ಕಾಮಗಾರಿಯ ಮೊತ್ತ 45.30 ಕೋಟಿ. ಕೃಷ್ಣಾ ಭಾಗ್ಯ ಜಲನಿಗಮ ಮೂಲಕ 37.68 ಕೋಟಿ ಕಾಮಗಾರಿಯನ್ನು ನಿರ್ವಹಿಸಿದ್ದು, ಇದಕ್ಕೆ ಸಂಬಂಧಪಟ್ಟ ಸಂಸ್ಥೆಯ ಕಾರ್ಯಪಾಲಕ ಅಭಿಯಂತರ ನೀಡಿರುವ ಪ್ರಮಾಣಪತ್ರಗಳನ್ನು ಗುತ್ತಿಗೆದಾರರು ಸಲ್ಲಿಸಿದ್ದಾರೆ. ಈ ಪತ್ರಗಳು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಪರಿಶೀಲಿಸದೆ ಸಿದ್ದೇಗೌಡ ಅವರು ಟೆಂಡರನ್ನು ಮಾನ್ಯ ಮಾಡಿ ಕಾರ್ಯಾದೇಶ ಪತ್ರವನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ತನಿಖೆ ನಡೆಸುವಂತೆ ಮಳೆ ನೀರು ಕಾಲುವೆ ಇಲಾಖೆ ಮುಖ್ಯ ಅಭಿಯಂತರರಿಗೆ ಪತ್ರ ಬರೆದಿದ್ದರೂ ಎಲ್ಲವನ್ನು ಮುಚ್ಚಿಟ್ಟು, ಅರ್ಹತೆಯೇ ಇಲ್ಲದ ಟಾಂ ಟಾಂ ಪೆದ್ದ ಗುರುವಾರೆಡ್ಡಿ ಅವರಿಗೆ ಕಾರ್ಯಾದೇಶ ಪತ್ರವನ್ನು ನೀಡಿರುವ ಎಲ್ಲಾ ಅಧಿಕಾರಿಗಳು ಹಾಗೂ ನಕಲಿ ದಾಖಲೆ ನೀಡಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಗುತ್ತಿಗೆದಾರರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕು ಭೀಮರಾಯನಗುಡಿಯ ಕೃಷ್ಣಾ ಭಾಗ್ಯ ಜಲನಿಗಮ ವತಿಯಿಂದ ಕಾಮಗಾರಿ ನಡೆಸಿದ್ದೇನೆ ಎಂದು ಬಿಬಿಎಂಪಿಗೆ ಸಲ್ಲಿಸಿರುವ ದಾಖಲೆಗಳೆಲ್ಲವೂ ನಕಲಿ ಎಂದು ಅವರು ಹೇಳಿದ್ದಾರೆ.

Leave a Comment