ನಂಜನಗೂಡು ’ಅತಿ ಸೂಕ್ಷ್ಮ ಪ್ರದೇಶ ’

ಮೈಸೂರು, ಮಾ ೩೦- ಮೈಸೂರಿನ ನಂಜನಗೂಡಿನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿರುವುದರಿಂದ ಆ ಪ್ರದೇಶವನ್ನು ’ಅತಿ ಸೂಕ್ಷ್ಮ ಪ್ರದೇಶ’ ಎಂದು ಜಿಲ್ಲಾಡಳಿತ ಘೋಷಿಸಿದೆ.

ಇಲ್ಲಿನ ಔಷಧ ಕಂಪನಿಯಲ್ಲಿ ವಿದೇಶಿಗರೊಂದಿಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಕಂಡುಬಂದಿದ್ದು, ಅದೇ ಕಂಪನಿಯ ಐವರಲ್ಲಿ ಕೂಡ ಸೋಂಕು ದೃಢಪಟ್ಟಿತ್ತು. ಆದ್ದರಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲರನ್ನು ಪ್ರತ್ಯೇಕವಾಗಿರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಈ ಕುರಿತು ಎಸ್ ಪಿ ಸಿ.ಬಿ.ರಿಷ್ಯಂತ್ ವಿಡಿಯೋ ಸಂದೇಶ ಬಿಡುಗಡೆಗೊಳಿಸಿದ್ದು, ಕಂಪನಿಯಲ್ಲಿರುವ ೧,೩೭೨ ಉದ್ಯೋಗಿಗಳ ಪೈಕಿ ಈಗಾಗಲೇ ೯೦೦ ಜನರನ್ನು ಪ್ರತ್ಯೇಕವಾಗಿರಿಸಲಾಗಿದ್ದು, ಉಳಿದವರನ್ನು ಇಂದು ಪ್ರತ್ಯೇಕವಾಗಿರಿಸಲಾಗಿರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಸದ್ಯ ನಂಜನಗೂಡನ್ನು ಒಂದು ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಪ್ರತ್ಯೇಕವಾಗಿರಿಸಿದವರ ಮೇಲೆ ನಿಗಾ ವಹಿಸಲಾಗುವುದು. ಅವರು ಮನೆಯಿಂದ ಹೊರಬರದಂತೆ ಗಮನಹರಿಸಲು ಗಸ್ತು ಪೊಲೀಸರನ್ನು ನಿಯೋಜಿಸಲಾಗುವುದು. ಇಲ್ಲಿನ ಎಪಿಎಂಸಿಗೆ ಕೂಡ ಹೋಲ್ ಸೇಲ್ ಮಾರಾಟಗಾರರನ್ನು ಹೊರತುಪಡಿಸಿ ಉಳಿದವರಿಗೆ ಅವಕಾಶ ನೀಡಲಾಗುತ್ತಿಲ್ಲ.

ಇಲ್ಲಿಯವರೆಗೆ ಮೈಸೂರು ಜಿಲ್ಲೆಯಲ್ಲಿ ೭೭೬ ಜನರು ೧೪ ದಿನಗಳ ಪ್ರತ್ಯೇಕವಾಸ ಪೂರ್ಣಗೊಳಿಸಿದ್ದಾರೆ ೧,೭೦೨ ಮಂದಿ ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ. ತಪಾಸಣೆಗೊಳಪಡಿಸಿರುವ ೯೦ ಮಾದರಿಗಳ ಪೈಕಿ ೮೨ ನಕಾರಾತ್ಮಕ ವರದಿ ಬಂದಿದೆ.

ಮೂವರು ನಾಪತ್ತೆ
ಈ ಔಷಧ ಕಂಪನಿಯಲ್ಲಿ ಅರಕಲಗೂಡಿನ ಮೂಲದ ಮೂವರು ನೌಕರರು ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಆ ಮೂವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Comment