ಧ್ವನಿಸುರುಳಿ ವಿವಾದ ತನಿಖೆಗೆ ಸಿಎಂ ಸಮ್ಮತಿ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಫೆ. ೧೧- ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ವಿವಾದಾತ್ಮಕ ಧ್ವನಿ ಸುರುಳಿ ಕುರಿತಂತೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಪ್ರಕಟಿಸಿದರು.

ಶಾಸಕರ ಖರೀದಿ ವಿಚಾರದಲ್ಲಿ ಮತ್ತು ರಾಜೀನಾಮೆ ಕೊಡಿಸುವ ನಿಟ್ಟಿನಲ್ಲಿ ಸಭಾಧ್ಯಕ್ಷರನ್ನು ಒಪ್ಪಿಸಲಾಗುವುದು ಎಂಬ ಸಂಭಾಷಣೆ ಇರುವ ಧ್ವನಿ ಸುರುಳಿ ಕುರಿತಂತೆ ಸಮಗ್ರ ತನಿಖೆ ಆಗಬೇಕು. ವಿಶೇಷ ತನಿಖಾ ತಂಡ ರಚಿಸಿ 15 ದಿನದೊಳಗೆ ವರದಿ ಪಡೆಯಬೇಕು ಎಂಬ ಸಭಾಧ್ಯಕ್ಷ ರಮೇಶ್‌ಕುಮಾರ್ ಅವರ ಸಲಹೆಗೆ ಒಪ್ಪಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನಿಷ್ಪಕ್ಷಪಾತ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ಆದೇಶ ನೀಡುವುದಾಗಿ ಹೇಳಿದರು.

ವಿವಾದಾತ್ಮಕ ಧ್ವನಿ ಸುರುಳಿ ಬಗ್ಗೆ ಸುದೀರ್ಘ ಚರ್ಚೆಯಾದ ನಂತರ ಸಭಾಧ್ಯಕ್ಷ ರಮೇಶ್‌ಕುಮಾರ್ ಈ ಪ್ರಕರಣದ ತನಿಖೆಯಾಗಲಿ ಎಂಬ ಸಲಹೆಯನ್ನು ರಮೇಶ್‌ಕುಮಾರ್ ಮುಂದಿಟ್ಟರು. ಅದಕ್ಕೆ ಒಪ್ಪಿದ ಕುಮಾರಸ್ವಾಮಿ ಅವರು ಈ ಸದನ ಮತ್ತು ಎಲ್ಲ ಶಾಸಕರ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ತನಿಖೆಯಾಗುವ ಅಗತ್ಯವಿದೆ. ಇದಕ್ಕೆ ಆದೇಶ ನೀಡಲಾಗುವುದು ಎಂದರು.

ಸಭಾಧ್ಯಕ್ಷ ರಮೇಶ್‌ಕುಮಾರ್ ಅವರ ಹೆಸರನ್ನು ಧ್ವನಿ ಸುರುಳಿಯಲ್ಲಿ ಪ್ರಸ್ತಾಪ ಮಾಡಿರುವ ಬಗ್ಗೆ ತಮಗೆ ನೋವುಂಟಾಗಿದೆ. ನಿಮ್ಮ ಮನಸ್ಸಿಗೂ ಘಾಸಿಯಾಗಿದ್ದು, ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಭಾಧ್ಯಕ್ಷರ ಗಮನಕ್ಕೆ ತಂದರು.

ಈ ಸರ್ಕಾರ ಬಂದಾಗಿನಿಂದ ಪ್ರತಿಯೊಂದು ಹಂತದಲ್ಲೂ ನಡೆದಿರುವ ವಿಚಾರಗಳನ್ನು ತಮ್ಮ ಗಮನಕ್ಕೆ ತಂದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ತಾವು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ಕೈಗೊಳ್ಳಬಾರದು. ರಾಜ್ಯದ ವಿಶೇಷವಾಗಿ ಈ ಸದನದ ಎಲ್ಲ ಸದಸ್ಯರ ಗೌರವ ರಕ್ಷಣೆ ಮಾಡುವ ಜವಾಬ್ದಾರಿ ತಮ್ಮ ಮೇಲಿದೆ. ನಿಮ್ಮ ಮೇಲೆ ಎಲ್ಲರಿಗೂ ವಿಶ್ವಾಸ ಇದೆ. ಈ ಪ್ರಕರಣ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಬಿಜೆಪಿಯ ಕೆ.ಎಸ್.ಈಶ್ವರಪ್ಪ ಮಾಡಿರುವ ಸಲಹೆಯನ್ನು ಒಪ್ಪುತ್ತೇನೆ ಎಂದರು.

Leave a Comment