ಧೋನಿ ಬೆಂಬಲಕ್ಕೆ ನಿಂತ ಕೊಹ್ಲಿ ಟೀಕೆಗಳಿಗೆ ಉತ್ತರ

ನವದೆಹಲಿ, ನ 8- ಇತ್ತೀಚೆಗೆ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಅನೇಕರಿಂದ ಭಾರತ ಕ್ರಿಕೆಟ್ ತಂಡದ ನಾಯಕ ಎಂ.ಎಸ್. ಧೋನಿ ನಿವೃತ್ತಿ ಕುರಿತಾಗಿ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಧೋನಿ ಪರ ಬ್ಯಾಟ್ ಮಾಡಿದ್ದು, ಟೀಂ ಇಂಡಿಯಾಗೆ ಅವರು ನೀಡಿರುವ ಕೊಡುಗೆಯನ್ನು ಹೊಗಳಿ ಕೊಂಡಾಡಿದ್ದಾರೆ. ಧೋನಿ ಅವರನ್ನು ಯಾಕೆ ಗುರಿ ಮಾಡುತ್ತೀರಿ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಧೋನಿ ಅವರಿಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹಾಗೆಂದು ಅವರು ವಿಫಲರಾಗಿದ್ದಾರೆ ಎಂದು ಅರ್ಥವಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ತಿರುವನಂತಪುರದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ -20 ಸರಣಿಯನ್ನು ಜಯಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 36 ವರ್ಷದ ಧೋನಿ ಅವರತ್ತ ಬೆರಳು ತೋರಿಸುವುದು ಸರಿಯಲ್ಲ. ನಾನು ಬ್ಯಾಟ್ಸ್ ಮನ್ ಆಗಿ 3 ಪಂದ್ಯಗಳಲ್ಲಿ ವಿಫಲವಾದರೆ, ಯಾರೂ ನನಗೆ ಬೆರಳು ತೋರಿಸುವುದಿಲ್ಲ. ನಾನು 35 ವರ್ಷಕ್ಕಿಂತ ಕೆಳಗೆ ಇದ್ದೇನೆ. ಧೋನಿ ಸಮರ್ಥ ಆಟಗಾರನಾಗಿದ್ದಾರೆ. ಪ್ರತಿ ಪಂದ್ಯದಲ್ಲಿಯೂ ಅವರು ತಂತ್ರಗಾರಿಕೆಯ ಕೊಡುಗೆ ನೀಡುತ್ತಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಬ್ಯಾಟಿಂಗ್ ಮಾಡಲು ಅವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಅವರು ಬ್ಯಾಟ್ ಮಾಡಲು ಬಂದ ಸ್ಥಾನ, ಸನ್ನಿವೇಶ ಅರ್ಥ ಮಾಡಿಕೊಳ್ಳಬೇಕೆಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.ರಾಜ್ ಕೋಟ್ ಪಂದ್ಯದ ಬಳಿಕ ಧೋನಿ ಟೀಕೆಗೆ ಗುರಿಯಾಗಿದ್ದರು. ಮಾಜಿ ಆಟಗಾರರಾದ ವಿ.ವಿ.ಎಸ್. ಲಕ್ಷ್ಮಣ್, ಅಜಿತ್ ಅಗರ್ಕರ್ ಅವರು, ಧೋನಿ ನಿವೃತ್ತಿಯ ಬಗ್ಗೆ ಮಾತನಾಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಧೋನಿ 25, 18 ಮತ್ತು 25 ರನ್ ಗಳಿಸಿದ್ದರು. ಟಿ -20 ಸರಣಿಯಲ್ಲಿ 7, 49, 0 ರನ್ ಗಳಿಸಿದ್ದಾರೆ.

Leave a Comment